ರಾಣೇಬೆನ್ನೂರು,ಡಿ.10- ನಿನ್ನೆ ರಾತ್ರಿ ಇಲ್ಲಿನ ನಗರದೇವತೆ ತುಂಗಾಜಲ ಚೌಡೇಶ್ವರಿ ದೇವಿಯ ದೇವಸ್ಥಾನದ ಬಾಗಿಲು ಬೀಗ ಮುರಿದು ಸುಮಾರು 13 ಕೆ.ಜಿ ತೂಕದ ಬೆಳ್ಳಿಯ ಆಭರಣ ಹಾಗೂ 1 ತೊಲ ತೂಕದ ತಾಳಿಸರದ ಜೊತೆಗೆ ಸಿಸಿ ಕ್ಯಾಮರಾವನ್ನೂ ಕಳ್ಳತನ ಮಾಡಲಾಗಿದೆ. ಪತ್ತೆ ಮಾಡುವಂತೆ ನಗರ ಆರಕ್ಷಕ ಠಾಣೆಗೆ ದೇವಸ್ಥಾನ ಸಮಿತಿಯ ಅಧ್ಯಕ್ಷ, ನಗರಸಭೆ ಸದಸ್ಯ ಶೇಖಪ್ಪ ಹೊಸಗೌಡ್ರ ದೂರು ಸಲ್ಲಿಸಿದ್ದಾರೆ.
ದೇವಸ್ಥಾನದಲ್ಲಿದ್ದ ನಾಗರ ಹೆಡೆ, ದೇವಿ ಮುಖ, ಎರಡು ಕಾಲು, ದೇವಿಯ ಸಂಪೂರ್ಣ ಕವಚ, ಎರಡು ಕೈ, ಖಡ್ಗ, ಕುಂಕುಮ ಭರಣಿ, ಕಾಲು ಕಡಗ, ಕೈ ಕಡಗ, ಎರಡು ಹಸ್ತ, ಎರಡು ಬಿಂದಿಗೆ, ಒಂಭತ್ತು ದೀಪಗಳ ಆರತಿ ತಟ್ಟೆ, ಲಿಂಗದಕಾಯಿ, ಎರಡು ಚಮಚ, ಎರಡು ಬಟ್ಟಲು ಹಾಗೂ ಸಿಸಿ ಕ್ಯಾಮರಾ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮುಂದಿನ ತಿಂಗಳು ಬರಲಿರುವ ದೇವಿ ಉತ್ಸವದ ಕುರಿತು ಕಮಿಟಿಯವರು ನಿನ್ನೆ ರಾತ್ರಿ 10 ಗಂಟೆವರೆಗೂ ಚರ್ಚೆ ನಡೆಸಿ, ನಂತರ ಮನೆಗೆ ತೆರಳಿದ್ದೆವು. ರಾತ್ರಿ 11 ರಿಂದ ಬೆಳಿಗ್ಗೆ 6 ಗಂಟೆಯೊಳಗೆ ಈ ಕಳ್ಳತನ ನಡೆದಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆಳಿಗ್ಗೆ ಅರ್ಚಕ ಪೂಜೆ ಮಾಡಲು ಬಂದಾಗ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಬಗ್ಗೆ ತಿಳಿದಿದೆ.