ಮಲೇಬೆನ್ನೂರು, ನ.27- ಇಲ್ಲಿನ ಪುರಸಭೆಯ ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದೆ ಎಂದು ಬಲ್ಲ ಮೂಲಗಳ ತಿಳಿದು ಬಂದಿದೆ. ಆದರೆ, ಇದುವರೆಗೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ. ಒಂದು ವೇಳೆ ಎಸ್ಟಿ ಮೀಸಲು ನಿಗದಿ ಆಗಿರುವುದು ನಿಜವಾಗಿದ್ದರೆ ಬಹಳ ಸುಲಭವಾಗಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಕ್ಷಕ್ಕೆ ಸಿಗಲಿದೆ. ಏಕೆಂದರೆ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಎಸ್ಟಿಗೆ ಸೇರಿದ ಸದಸ್ಯರು ಗೆದ್ದಿಲ್ಲ . ಗೆದ್ದಿರುವ ಏಕೈಕ ಎಸ್ಟಿ ಸದಸ್ಯ ಜೆಡಿಎಸ್ ಪಕ್ಷದವರಾಗಿದ್ದಾರೆ.
ಈ ಹಿಂದೆ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಮಹಿಳೆಗೆ ಮೀಸಲು ಮಾಡಲಾಗಿತ್ತು. ಆದರೆ, ಪುರಸಭೆಯಲ್ಲಿ ಎಸ್ಟಿ ಮಹಿಳಾ ಸದಸ್ಯರು ಯಾರೂ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ನಪ್ಸಿಯಾ ಬಾನು ಚಮನ್ ಷಾ ಅವರಿಗೆ ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಅಧ್ಯಕ್ಷ ಸ್ಥಾನವನ್ನು ಎಸ್ಸಿ ಮಹಿಳೆ, ಸಾಮಾನ್ಯ, ಬಿಸಿಎಂಎ ಗೆ ನೀಡುವಂತೆ ಪುರಸಭೆ ಸದಸ್ಯರು ಕೋರ್ಟ್‌ಗೆ ಹೋಗಿದ್ದರು. ಜೊತೆಗೆ ಸರ್ಕಾರದ ಮೇಲೆ ಒತ್ತಡವನ್ನೂ ಹಾಕಿದ್ದರು ಎನ್ನಲಾಗಿದೆ, ಅಂತಿಮವಾಗಿ ಸರ್ಕಾರ ಬುಧವಾರ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಗೆ ಮೀಸಲು ಮಾಡಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ ಗುಂಪಿನಲ್ಲಿ 12 ಜನ ಕಾಂಗ್ರೆಸ್ ಸದಸ್ಯರು ಮತ್ತು ಒಬ್ಬರು ಪಕ್ಷೇತರ ಹಾಗೂ ಬಿ.ಎಂ.ವಾಗೀಶ್ ಸ್ವಾಮಿ ಜೊತೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿರುವ ನಾಲ್ವರು ಬಿಜೆಪಿ ಸದಸ್ಯರು ಸೇರಿ ಒಟ್ಟು 17 ಸದಸ್ಯರಿದ್ದು, 3 ಜೆಡಿಎಸ್ ಮತ್ತು 3 ಬಿಜೆಪಿ ಸದಸ್ಯರಿದ್ದಾರೆ. ಎಸ್ಟಿ ಮೀಸಲಿನಲ್ಲಿ ಗೆದ್ದಿರುವ ಸದಸ್ಯ ಟಿ. ಹನುಮಂತಪ್ಪ ಅವರು ಜೆಡಿಎಸ್ ಪಕ್ಷದಲ್ಲಿದ್ದಾರೆ.