ಇತ್ತಿಚೇಗೆ ತೆರವುಗೊಂಡ ತಾತ್ಕಾಲಿಕ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದ ಜಾಗವನ್ನು ಹೈಸ್ಕೂಲ್ ಮೈದಾನಕ್ಕೆ ನೀಡುವ ಆದೇಶ ಆಗಿದೆ.
ಖಾಸಗಿ ಬಸ್ ನಿಲ್ದಾಣದ ಒಂದು ಬದಿಗಿರುವ ಮಳಿಗೆಗಳನ್ನು ಉಳಿಸಿಕೊಂಡು ಹೂವು, ಪತ್ರಿಕಾ ವಿತರಕರಿಗೆ ಅಲ್ಲಿ ಅನುಕೂಲ ಕಲ್ಪಿಸುವ ಯೋಚನೆ ಮಾಡಲಾಗಿದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ದಾವಣಗೆರೆ, ಅ.28- ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಹೈಸ್ಕೂಲ್ ಮೈದಾನದಲ್ಲಿ ಅ.30ರಿಂದ ನ.2ರ ವರೆಗೆ ಪಟಾಕಿ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸೂರು ಘಟನೆ ನಡೆದ ಬಳಿಕ ಸರ್ಕಾರವು ಪಟಾಕಿ ಮಾರಾಟ ಮಾಡಲು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿ ತಂದಿದೆ. ಈ ಕಾನೂನಿಗೆ ಬದ್ದವಾಗಿ ಜಿಲ್ಲಾಡಳಿತ ಸೂಚಿಸಿದ ನಿಯಮದಂತೆ ಇಲ್ಲಿ ಪಟಾಕಿ ವಹಿವಾಟು ನಡೆಸಲಾಗುವುದು ಎಂದು ತಿಳಿಸಿದರು.
ಪರಿಸರಕ್ಕೆ ತೊಂದರೆ ಆಗದಿರಲು ಸರ್ಕಾರ ಸೂಚಿಸಿದ ಹಸಿರು ಪಟಾಕಿಯನ್ನೇ ಮಾರಾಟ ಮಾಡಲಾಗುವುದು. ಕೆಲವೆಡೆ ಪಟಾಕಿ ಅಂಗಡಿಗಳ ದುರಂತ ಸಂಭವಿಸಿದ್ದರಿಂದ ಮಾರಾಟ ಪ್ರಕ್ರಿಯೆ ಊರಿನಾಚೆ ಮಾಡಬೇಕೆಂಬ ಮಾತುಗಳು ಬಂದಾಗ ಜಿಲ್ಲಾ ಉಸ್ತುವಾರಿ ಸಚಿವರೇ ಹೈಸ್ಕೂಲ್ ಮೈದಾನದಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆಂದು ಹೇಳಿದರು.
ರಾಜ್ಯದಲ್ಲಿ ಮಳೆ- ಬೆಳೆ ಸಮೃದ್ಧವಾಗಿರುವುದರಿಂದ ಎಲ್ಲರೂ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದ ಅವರು, ಚಿಕ್ಕ ಮಕ್ಕಳು ಪಟಾಕಿ ಹೊಡೆಯುವ ವೇಳೆ ಹಿರಿಯರು ಎಚ್ಚರಿಕೆ ವಹಿಸಬೇಕು ಎಂದರು,
ಸಂಘದ ಸದಸ್ಯ ಸಿ.ಜಿ. ಶ್ರೀನಿವಾಸ್ ಮಾತನಾಡಿ, ಕೋವಿಡ್ ನಂತರದ ದಿನಗಳಿಂದ ಹಸಿರು ಪಟಾಕಿ ಮಾರಾಟ ನಿಯಮ ಜಾರಿಗೆ ಬಂದಿದೆ. ದೇಶದ 1500 ಪಟಾಕಿ ಕಂಪನಿಗಳಲ್ಲೂ ಹಸಿರು ಪಟಾಕಿ ಉತ್ಪಾದನೆ ನಡೆದಿದೆ. ಹಾಗಾಗಿ ಇಲ್ಲಿನ ಎಲ್ಲಾ ಮಳಿಗೆಯಲ್ಲೂ ಕ್ಯೂಆರ್ ಕೋಡ್ ಇರುವ ಹಸಿರು ಪಟಾಕಿಗಳಿರುತ್ತವೆ ಎಂದು ಮಾಹಿತಿ ನೀಡಿದರು..
ಸಂಘದ ಸದಸ್ಯ ಬಿ.ಎಸ್ ಸಿದ್ದಪ್ಪ ಮಾತ ನಾಡಿ, ಯಾವುದೇ ಅಹಿತಕರ ಘಟನೆ ನಡೆಯ ದಂತೆ 50 ವರ್ಷಗಳಿಂದ ಪಟಾಕಿ ಮಾರಾಟ ಮಾಡುತ್ತಿದ್ದೇವೆ. ಸುರಕ್ಷತೆ ದೃಷ್ಟಿಯಿಂದ 2 ಅಗ್ನಿ ಶಾಮಕ ದಳದ ವಾಹನಗಳು ಸದಾ ಇರಿಸಿಕೊಂಡಿದ್ದೇವೆ ಎಂದು ಹೇಳಿದರು.
ಈ ವೇಳೆ ಸಂಘದ ಪದಾಧಿಕಾರಿಗಳಾದ ರಾಘವೇಂದ್ರ, ಜಗನ್ನಾಥ, ರಮೇಶ್, ಸಿದ್ದಣ್ಣ, ಹಾಲೇಶಪ್ಪ, ಕಾರ್ತಿಕ್, ರುದ್ರೇಶಗೌಡ, ಶಿವು ಐನಳ್ಳಿ ಮತ್ತಿತರರಿದ್ದರು.