ದಾವಣಗೆರೆ, ಅ. 27-ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘಟನೆಯ ಮೂಲ ಸಿದ್ಧಾಂತಕ್ಕೆ ಚ್ಯುತಿಯಾಗದಂತೆ ತಾತ್ವಿಕ ಚಿಂತನೆಯುಳ್ಳ ಪ್ರಾಮಾಣಿಕ ಹೋರಾಟಗಾರರ ಪಡೆ ರಚಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಸಮರ್ಥ ಹೋರಾಟ ನಡೆಸಲು ಯುವ ಪಡೆಗೂ ಹೆಚ್ಚಿನ ಗಮನ ನೀಡಲಾಗಿದೆ ಎಂದರು.
ಕಳೆದ ವರ್ಷ ರಾಜ್ಯದ 192 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ಇತ್ತು. ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡಿಲ್ಲ.
ಕಾಟಾಚಾರಕ್ಕೆ ಕೆಲವರಿಗೆ ನೀಡಿಲ್ಲ. ಪರಿಹಾರ ಬರುತ್ತದೆ ಎಂದು ಕಾಲ ತಳ್ಳುತ್ತಿದೆ.
ಈಗ ಅತಿವೃಷ್ಠಿ ಆಗಿದೆ. ಸರ್ಕಾರ ಸರಿಯಾಗಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಬಡಗಲಪುರದ ನಾಗೇಂದ್ರ ಮಾತನಾಡಿ, ಕುಲಾಂತರಿ ಬೀಜ ನೀತಿಯ ವಿರುದ್ಧ ರೈತರು ತೀವ್ರ ಸ್ವರೂಪದ ಹೋರಾಟ ನಡೆಸುತ್ತಿದ್ದಾರೆ.
ಆದರೂ ಕೇಂದ್ರ ಕುಲಾಂತರಿ ಬೀಜ ನೀತಿ ಜಾರಿಗೆ ಮುಂದಾಗಿದೆ. ರಾಜ್ಯ ಸರ್ಕಾರಕ್ಕೆ ತಿರಸ್ಕರಿಸುವ ಅಧಿಕಾರ ಇದೆ. ಅದರ ಪ್ರಕಾರ ರಾಜ್ಯ ಸರ್ಕಾರ ಕುಲಾಂತರಿ ಬೀಜಗಳಿಗೆ ಅನುಮತಿ ನೀಡಬಾರದು.
ಭೂ ಸುಧಾರಣೆ ಕಾಯ್ದೆ ರದ್ದುಪಡಿಸಬೇಕು. ವಿದ್ಯುತ್ ನೀತಿಯನ್ನೂ ಸಹ ಜಾರಿಗೆ ತರಬಾರದೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರುಣ್ ಕುಮಾರ್ ಕುರುಡಿ, ಶಿವಾನಂದ ಕುಗ್ವೆ, ಬುಳ್ಳಾಪುರದ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.