ದಾವಣಗೆರೆ, ಅ. 27- ಪಾರಂಪರಿಕ ವೈದ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಾಡಿದ್ದು ದಿನಾಂಕ 29 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಧನ್ವಂತರಿ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪಾರಂಪರಿಕ ವೈದ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಶಿವಲಿಂಗಮ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧನ್ವಂತರಿ ಜಯಂತ್ಯುತ್ಸವದ ಪ್ರಯುಕ್ತ ಅಸಾಧ್ಯವಾದ ತಲೆನೋವಿಗೆ ಮತ್ತು ಮೂತ್ರಕೋಶದ ಕಲ್ಲು ನಿವಾರಣೆಗೆ ಉಚಿತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
29 ರಂದು ಬೆಳಿಗ್ಗೆ 10 ಕ್ಕೆ ಪ್ರಾಥಮಿಕ ಹಂತದ ಆರೋಗ್ಯದಲ್ಲಿ ಗಿಡ ಮೂಲಿಕೆಗಳ ಉಪಯೋಗವನ್ನು ತಿಳಿಸುವ `ಹಿತ್ತಲಗಿಡವೇ ಮದ್ದು’ ಎನ್ನುವ ವಿಷಯ ಕುರಿತು ನುರಿತ ಪಾರಂಪರಿಕ ವೈದ್ಯರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಿಗ್ಗೆ 11 ಕ್ಕೆ ಧನ್ವಂತರಿ ಪೂಜಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಎಸ್. ಬಸವಂತಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಪಾರಂಪರಿಕ ವೈದ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನೇರ್ಲಿಗಿ ಗುರುಸಿದ್ಧಪ್ಪ, ಜಿಲ್ಲಾ ಸಂಚಾಲಕಿ ಕೆ.ಎಂ. ಪುಷ್ಪಲತಾ ಮತ್ತಿತರರು ಭಾಗವಹಿಸಲಿದ್ದಾರೆ.
ಪಾರಂಪರಿಕ ವೈದ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಶಿವಲಿಂಗಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ ಪಾರಂಪರಿಕ ವೈದ್ಯಕ ಪರಿಷತ್ ಶಿಬಿರದಲ್ಲಿ ತರಬೇತಿ ಪಡೆದ 55 ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾರಂಪರಿಕ ವೈದ್ಯ ಪರಿಷತ್ ಪದಾಧಿಕಾರಿಗಳಾದ ಕೆ.ಪಿ. ಲತಾ, ಮಮತಾ ನಾಗರಾಜ್, ಪುಷ್ಪಲತಾ ಉಪಸ್ಥಿತರಿದ್ದರು.