ಜಾತಿ ಗಣತಿ ವರದಿ ಬಿಡುಗಡೆಗೆ ಹಾಲುಮತ ಮಹಾಸಭಾ ಆಗ್ರಹ

ದಾವಣಗೆರೆ, ಅ. 21- ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ ಗಣತಿ ವರದಿಯನ್ನು ಯಾರ ಒತ್ತಡಕ್ಕೂ ಮಣಿಯದೇ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಬಿಡುಗಡೆ ಮಾಡುವಂತೆ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹಾಲೇಕಲ್ಲು ಸಿ. ವೀರಣ್ಣ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015 ರಲ್ಲಿ ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಸರ್ಕಾರಿದಿಂದ ಅಂದಾಜು 165 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ರಾಜ್ಯದಲ್ಲಿರುವ ಎಲ್ಲಾ ಸಮುದಾಯದ ಪ್ರತಿ ಮನೆಯ  ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.

ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಹೇಳಿರುವುದು 9 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವರದಿಗೆ ಮರುಜೀವ ನೀಡಿದಂತಾಗಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಯಾರ ಒತ್ತಡಕ್ಕೂ ಮಣಿಯದೇ ಗಟ್ಟಿ ನಿರ್ಧಾರದಿಂದ ಅನುಮೋದಿಸಿ, ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ರಾಜ್ಯದ ಎಲ್ಲಾ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಸಮತೋಲನ ಸರಿಪಡಿಸಲು ಸಮ ಸಮಾಜ ನಿರ್ಮಾಣ ಮಾಡಲು ದೇಶದ ಸಂಪತ್ತು ಎಲ್ಲಾ ಸಮುದಾಯಗಳಿಗೂ ಸಮನಾಗಿ ಹಂಚಿಕೆಯಾಗಲು ಕಾಂತರಾಜ್ ವರದಿ ಸಹಕಾರಿಯಾಗಲಿದೆ  ಎಂದರು.

ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯದ ಎಲ್ಲಾ ಸಮುದಾಯಗಳಲ್ಲಿನ ಸ್ಥಿತಿಗತಿ ತಿಳಿಯಬೇಕಾದರೆ ಸಮೀಕ್ಷಾ ವರದಿ ಬಿಡುಗಡೆಯಾಗಲಿ. ನಮ್ಮ ಹಕ್ಕು ನಾವು ಪಡೆಯಲು ಅನುಕೂಲ ಆಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದೀಟೂರು ಚಂದ್ರು, ಹನುಮಂತಪ್ಪ ಸಲ್ಲಳ್ಳಿ, ಎಸ್.ಎಂ. ಸಿದ್ಧಲಿಂಗಪ್ಪ, ಮಂಜುನಾಥ್ ಸಂಕಲೀಪುರ, ನಾಗರಾಜ್ ಉಪಸ್ಥಿತರಿದ್ದರು. 

error: Content is protected !!