ನ್ಯಾಮತಿ, ಆ.29- ತಾಲ್ಲೂಕಿನ ಅಪ್ರಾಪ್ತ ಬಾಲಕಿಯ ಅಪಹರಣದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನೀಡಿದ ದೂರಿನನ್ವಯ ಪವನ ಎಂಬ ಯುವಕನನ್ನು ನ್ಯಾಮತಿ ಪೊಲೀಸರು ಗುರುವಾರ ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ಬಗ್ಗೆ ವರದಿಯಾಗಿದೆ.
ಒಂದೇ ಗ್ರಾಮದ ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, 9ನೇ ತರಗತಿ ಓದುತ್ತಿದ್ದ ಯುವತಿಯನ್ನು ಅದೇ ಗ್ರಾಮದ ಕೃಷಿ ಕೆಲಸ ಮಾಡುತ್ತಿದ್ದ 23 ವರ್ಷದ ಯುವಕ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಗ್ರಾಮದಿಂದ ಬೇರೆಡೆಗೆ ಕರೆದೊಯ್ಯಲಾಗಿದ್ದು, ಬಾಲಕಿ ಕಾಣೆಯಾದ ಹಿನ್ನೆಲೆಯಲ್ಲಿ ಯುವತಿ ಕುಟುಂಬಸ್ಥರು ನ್ಯಾಮತಿ ಠಾಣೆಯಲ್ಲಿ ದೂರು ನೀಡಿದ್ದರು.
ಭದ್ರಾವತಿಯಲ್ಲಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಗುರುವಾರ ನ್ಯಾಮತಿಗೆ ಕರೆತಂದಿದ್ದಾರೆ. ಕಾಣೆಯಾಗಲು ಸಹಕಾರ ನೀಡಿದ ಯುವಕನ ಇತರೆ ಮೂವರು ಸ್ನೇಹಿತರು ಕಾಣೆಯಾಗಿದ್ದಾರೆ. ಅವರನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗಿದೆ. ಇಂದು ಸ್ಥಳ ಮಹಜರು ನಡೆಸಲಾಗಿದೆ ಎಂದು ನ್ಯಾಮತಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ತಿಳಿಸಿದ್ದಾರೆ.