ಎಸ್ಸೆಸ್ ಕುಟುಂಬದ ಬಗೆಗಿನ ಟೀಕೆ ಸಲ್ಲದು

ಯುವ ಕಾಂಗ್ರೆಸ್ ಮುಖಂಡ ಶಿವರತನ್ ತಿರುಗೇಟು

ದಾವಣಗೆರೆ, ಆ. 11- ಹಿರಿಯ ರಾಜಕಾರಣಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಬಗೆಗಿನ ಟೀಕೆ ಸಲ್ಲದು.  ಶಾಮನೂರು ಕುಟುಂಬಕ್ಕೂ ಸಿದ್ಧರಾಮಯ್ಯ ಅವರಿಗೂ ಅವಿನಾಭಾವ ಸಂಬಂಧವಿದೆ ಎಂಬುವು ದನ್ನು ಯುವ ಮುಖಂಡ ಜಿ.ಬಿ. ವಿನಯ್ ಕುಮಾರ್ ಅರ್ಥ ಮಾಡಿ ಕೊಳ್ಳಬೇಕೆಂದು ಯುವ ಕಾಂಗ್ರೆಸ್ ಮುಖಂಡ ಶಿವರತನ್ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ದಾವಣಗೆರೆಯಲ್ಲಿ ಎಲ್ಲೂ ಕಾಣದ ವಿನಯ್ ಅವರು ಇದ್ದಕ್ಕಿದ್ದಂತೆ ದಿಢೀರ್ ಪ್ರತ್ಯಕ್ಷರಾಗಿದ್ದು, ಎಸ್ಸೆಸ್ ಅವರ ಕುಟುಂಬದ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂದರು.

ದಾವಣಗೆರೆ ಮನೆ ಮಗ ಅಂತಾ ಹೇಳಿಕೊಳ್ಳುವ ವಿನಯ್ ಕುಮಾರ್ ದಾವಣಗೆರೆ ರಾಜಕಾರಣಕ್ಕೆ ಅತಿಥಿ ಅಷ್ಟೇ. ಅವರಿಗೆ ಎಸ್ಸೆಸ್ ಕುಟುಂಬದ ಬಗ್ಗೆ ಮಾಹಿತಿ ಕೊರತೆ ಇದೆ ಎಂದು ಹೇಳಿದರು.

ದೊಡ್ಡವರ ಬಗ್ಗೆ ಮಾತನಾಡಿ ದೊಡ್ಡವನಾಗುತ್ತೇನೆ ಎಂಬ ಅವರ ತಪ್ಪು ಕಲ್ಪನೆ ಸರಿಪಡಿಸಿಕೊಳ್ಳಬೇಕು. ಮುಖ್ಯ ಮಂತ್ರಿ ಬದಲಾವಣೆ ಬಗ್ಗೆ ಎಷ್ಟು ಕೇಳಿದಾಗಲೂ ಕೂಡ ಬಹಿರಂಗವಾಗಿ ಎಸ್ಸೆಸ್ ಹೇಳಿಕೆ ನೀಡುವ ಮೂಲಕ ಬೆಂಬಲಿಸಿದ್ದಾರೆಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಸ್ವತಃ ಭಾಗವಹಿಸಿದ್ಧಲದೇ ಜಿಲ್ಲೆಯಿಂದ ಒಂದು ಸಾವಿರ ಕಾರ್ಯಕರ್ತರನ್ನು ಭಾಗವಹಿಸುವಂತೆ ಅವಕಾಶ ಮಾಡಿಕೊಟ್ಟಿದ್ದಾರೆಂದು ತಿಳಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಬೇರೆ ಎಲ್ಲಾ ಸಂಸದರಿಗಿಂತ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅನುದಾನ ಹಾಗೂ ಕಾರ್ಯಗಳ ಬಗ್ಗೆ ಚರ್ಚಿಸಿ, ಪ್ರಗತಿ ಬಗ್ಗೆ ಚಿಂತನೆ ನಡೆಸುತ್ತಿರುವುದು ಶ್ಲ್ಯಾಘನೀಯ. ಈ ಬಗ್ಗೆ ಮಾತನಾಡುವುದನ್ನು ಬಿಟ್ಟು, ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಜಿತ್ ಆಲೂರು, ಅಂಕಿತ್ ಮೊಯ್ಲಿ ಉಪಸ್ಥಿತರಿದ್ದರು. 

error: Content is protected !!