ಮೀಸಲಾತಿ ಪ್ರಮಾಣ ಪತ್ರ ರದ್ದು
ಜಗಳೂರು, ಜು. 29- ಸುಳ್ಳು ಮಾಹಿತಿ ನೀಡಿ ಬಿಸಿಎಂ. `ಬಿ’ ಪ್ರಮಾಣ ಪತ್ರ ಪಡೆದಿದ್ದನ್ನು ರದ್ದುಗೊಳಿಸಿ ಆದೇಶಿಸಿದ್ದ ಹರಪನಹಳ್ಳಿ ಉಪ ವಿಭಾಗ ಅಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿರುವ ರಾಜ್ಯ ಹೈಕೋರ್ಟ್, ಇಲ್ಲಿನ ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯರೊಬ್ಬರ ಸದಸ್ಯತ್ವವನ್ನು ವಜಾ ಗೊಳಿಸಿ ಆದೇಶಿಸಿದೆ.
ಪಟ್ಟಣ ಪಂಚಾಯಿತಿಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಸಿಎಂ `ಬಿ’ ಮೀಸಲು ಕ್ಷೇತ್ರವಾದ 9ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ಟಿ. ರವಿಕುಮಾರ್ ಅವರು ಬಿ.ಸಿ.ಎಂ `ಬಿ’ ಪ್ರಮಾಣ ಪತ್ರ ಸಲ್ಲಿಸಿ ಆಯ್ಕೆಯಾಗಿದ್ದರು.
ಇವರ ವಿರುದ್ಧ ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ ರುದ್ರಮುನಿ ಅವರು, ರವಿಕುಮಾರ್ ಅವರು ಹೆಚ್ಚು ಜಮೀನು ಹೊಂದಿದ್ದು ಬಿಸಿಎಂ `ಬಿ’ ಪ್ರಮಾಣ ಪತ್ರ ನೀಡಿರುವುದು ತಪ್ಪು ಎಂದು ಹರಪನಹಳ್ಳಿ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು.
ಇದರ ಬಗ್ಗೆ ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿಗಳು ಆಯ್ಕೆಗೊಂಡ ಬಿ.ಟಿ ರವಿಕುಮಾರ್ ಅವರು ಎಂಟು ಹೆಕ್ಟೇರ್ ಗಿಂತಲೂ ಹೆಚ್ಚು ಜಮೀನು ಹೊಂದಿರುವ ದಾಖಲೆ ಇರುವುದರಿಂದ ತಹಶಿಲ್ದಾರ್ ನೀಡಿದ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಡಿಸೆಂಬರ್ 15, 2018ರಂದು ಆದೇಶ ಹೊರಡಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಸದಸ್ಯ ಬಿ.ಟಿ ರವಿಕುಮಾರ್ ರಾಜ್ಯ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರು.
ಹೈಕೋರ್ಟ್ ನಲ್ಲಿ ಸುದೀರ್ಘ 4 ವರ್ಷ ವಿಚಾರಣೆ ನಡೆದ ನಂತರ ಜುಲೈ 3, 2024ರಂದು ಪ್ರಮಾಣ ಪತ್ರವನ್ನು ರದ್ದುಪಡಿಸಿದ ಉಪವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಪರಾಜಿತ ಬಿಜೆಪಿ ಅಭ್ಯರ್ಥಿ ರುದ್ರಮುನಿ ಅವರನ್ನು ಪಟ್ಟಣ ಪಂಚಾಯತಿ ಯ ಒಂಬತ್ತನೇ ವಾರ್ಡಿನ ಕೌನ್ಸಿಲರ್ ಎಂದು ಘೋಷಿಸಲು ಆದೇಶ ನೀಡಿದೆ.
ಕೋರ್ಟ್ ಆದೇಶದ ಅನ್ವಯ ರವಿಕುಮಾರ್ ಸದಸ್ಯತ್ವವನ್ನು ವಜಾ ಗೊಳಿಸಿ ಎರಡನೇ ಹೆಚ್ಚು ಮತ ಪಡೆದಿರುವ ನನ್ನನ್ನು ಸದಸ್ಯನೆಂದು ಘೋಷಿಸಬೇಕು ಎಂದು ಜುಲೈ 26ರಂದು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿರುವುದಾಗಿ ಪರಾಜಿತ ಬಿಜೆಪಿ ಅಭ್ಯರ್ಥಿ ರುದ್ರಮುನಿ ತಿಳಿಸಿದ್ದಾರೆ.