ದಾವಣಗೆರೆ, ಜು.7- ಹನಿ ನಿರಾವರಿ ಯೋಜನೆಗೆ ನೀಡುತ್ತಿದ್ದ ಸಹಾಯ ಧನದ ಮೊತ್ತವನ್ನು ಶೇ.75ರಿಂದ 45ಕ್ಕೆ ಇಳಿಸಿದ ಕಾಂಗ್ರೆಸ್ ಸರ್ಕಾರ, ರೈತ ವಿರೋಧಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಗೆ ಕೇಂದ್ರ ಸರ್ಕಾರ ನೀಡುವ ಶೇ.27ರಷ್ಟು ಸಬ್ಸಿಡಿ ಹಣಕ್ಕೆ ರಾಜ್ಯ ಸರ್ಕಾರ ಶೇ.48ರಷ್ಟು ಸೇರಿಸಿ ಒಟ್ಟು ಶೇ.75ರಷ್ಟು ಸಹಾಯ ಧನ ರೈತರ ಪಾಲಾಗುತ್ತಿತ್ತು, ಆದರೆ ರಾಜ್ಯ ಸರ್ಕಾರ ಗ್ಯಾರಂಟಿ ಹಣದ ಕ್ರೋಢೀಕರಣಕ್ಕಾಗಿ ತನ್ನ ಪಾಲಿನಲ್ಲಿ ಶೇ.18ರಷ್ಟು ಕಡಿತಗೊಳಿಸಿ ಒಟ್ಟು ಸಹಾಯ ಧನವನ್ನು ಶೇ.45ಕ್ಕೆ ಇಳಿಸಿ ರುವುದು ಖಂಡನೀಯ ಎಂದರು.
ಜಿಲ್ಲೆಯಲ್ಲಿ 5466 ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದು, ರಾಜ್ಯ ಸರ್ಕಾರದ ಈ ಆದೇಶ ಜಿಲ್ಲೆಯ ರೈತರಿಗೆ ಆರ್ಥಿಕ ಹೊರೆ ಹೆಚ್ಚಿಸುವ ಜತೆಗೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ಹೇಳಿದರು.
ಹಾಲು ಉತ್ಪಾದನೆ ಹೆಚ್ಚಾಗಿದ್ದರಿಂದ, ರೈತರ ಹಾಲು ಉತ್ಪಾದನಾ ಸಾಮರ್ಥ್ಯ ಕುಗ್ಗಿಸುವ ಕುತಂತ್ರದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಖರೀದಿಸುವ ಹಾಲಿನ ದರವನ್ನು 2ರೂ.ಗೆ ಕಡಿತ ಮಾಡಲು ಆದೇಶಿಸಿರುವುದು ಸರಿಯಲ್ಲ ಎಂದು ದೂರಿದರು.
ಬಿತ್ತನೆ ಬೀಜ, ಪೆಟ್ರೋಲ್-ಡೀಸೆಲ್, ಹಾಲು ಮತ್ತು ಮದ್ಯದ ಬೆಲೆ ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆ ಮಾಡಿ ಈಗ ರೈತರ ಸಹಾಯ ಧನಕ್ಕೂ ಕಣ್ಣು ಹಾಕಿದ ಸರ್ಕಾರ, ರೈತರ ಸಾಮರ್ಥ್ಯ ಕುಗ್ಗಿಸುವ ಕಾರ್ಯ ಮಾಡುತ್ತಿದೆ ಎಂದು ಟೀಕಿಸಿದರು.
ಮಳಲಕೆರೆ ಸದಾನಂದ, ಮಲ್ಲೂರು ಬಸವರಾಜ್, ಕಬ್ಬೂರ್ ಬಸವರಾಜ್, ಮಲ್ಲಿಕಾರ್ಜುನ್, ಆನೆಕಲ್ ವಿಜಯ್‍ಕುಮಾರ್, ಅಣಜಿ ಗುಡ್ಡೇಶ್, ಬಾತಿ ಬಿ.ಕೆ. ಸುರೇಶ್ ಮತ್ತು ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.