ಮಾದಕ ಸೇವನೆ, ಮಾರಾಟ ತಡೆಯಲು ಪೊಲೀಸರೊಂದಿಗೆ ಕೈ ಜೋಡಿಸಿ

ಸಾಮಾಜಿಕ ಪಿಡುಗಾದ ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುವವರ ವಿರುದ್ಧ ಸಾರ್ವಜನಿಕರು, ಪೊಲೀಸರ ಜೊತೆ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ನಿಮ್ಮ ಸುತ್ತ-ಮುತ್ತಲಿನಲ್ಲಿ ಮಾದಕ ವಸ್ತು ಸೇವನೆ ಹಾಗೂ ಮಾರಾಟ ಮಾಡುವವರು ಕಂಡು ಬಂದಲ್ಲಿ 112ಗೆ ಕರೆ ಮಾಡಿ ಪೊಲೀಸರ ಗಮನಕ್ಕೆ ತರುವಂತೆ ಆರಕ್ಷಕ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ದಾವಣಗೆರೆ, ಜೂ.24- ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಜನವರಿಯಿಂದ ಈ ವರೆಗೆ ಒಟ್ಟು 67 ಎನ್‌ಡಿಪಿಎಸ್‌ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಒಟ್ಟು ಪ್ರಕರಣಗಳಲ್ಲಿ 82 ಆಪಾದಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಈ ಪೈಕಿ ಮಾದಕ ವಸ್ತು ಸೇವಿಸುವವರ ವಿರುದ್ಧ 58 ಪ್ರಕರಣ ಮತ್ತು ಮಾದಕ ವಸ್ತುಗಳ ಮಾರಾಟ ಗಾರರ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ.

ಮೇ 25ರಿಂದ ಜೂ.15ರ ಕಾಲಾವಧಿಯಲ್ಲಿ 90 ಜನರ ಮೇಲೆ ಅನುಮಾನ ಬಂದ ಕಾರಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 9ಜನರ ವೈದ್ಯಕೀಯ ಪರೀಕ್ಷೆಯ ವರದಿ ಮಾದಕ ವಸ್ತು  ಸೇವನೆ ಮಾಡುತ್ತಾರೆ ಎಂಬುದಾಗಿ ತಿಳಿಸಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ.

ಪೊಲೀಸ್ ಅಧಿಕಾರಿಗಳು ಠಾಣಾ ಮಟ್ಟದಲ್ಲಿ ಬರುವ ಶಾಲಾ-ಕಾಲೇಜು, ವಿದ್ಯಾರ್ಥಿ ವಸತಿ ಗೃಹ ಮತ್ತು ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ಕಾನೂನು ಬಾಹಿರ ಮಾದಕ ವಸ್ತು ಸೇವೆನೆಯಿಂದಾಗುವ ದುಷ್ಪರಿಣಾಮ ಹಾಗೂ ಅವುಗಳನ್ನು ಮಾರಾಟ ಮಾಡಿದರೆ ಕೈಗೊಳ್ಳುವ ಕಾನೂನು ಕ್ರಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಮಾರಾಟದ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರು ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಹಲವು ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರತಿದಿನ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಮಾಡುವವರ  ಮೇಲೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!