ಐಸಿಯುನಲ್ಲಿ ಮಹಾನಗರ ಪಾಲಿಕೆ ಆಡಳಿತ

ಐಸಿಯುನಲ್ಲಿ ಮಹಾನಗರ ಪಾಲಿಕೆ ಆಡಳಿತ

ದಾವಣಗೆರೆ, ಜೂ. 20- ಮಹಾನಗರ ಪಾಲಿಕೆ ಆಡಳಿತ ನಿಷ್ಕ್ರಿಯಗೊಂಡಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದು ಇಲ್ಲದಂತಾಗಿದೆ. ಜನಪ್ರತಿನಿಧಿಗಳಿಗೆ ಬೆಲೆ ಇಲ್ಲದಂತಾಗಿದೆ. ಒಂದು ರೀತಿಯಲ್ಲಿ ಐಸಿಯುನಲ್ಲಿ ಪಾಲಿಕೆ ಆಡಳಿತ ಎನ್ನುವಂತಾಗಿದೆ ಎಂದು ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಬಾರಿ ಒತ್ತಡ ಹಾಕಿದ ನಂತರವೂ ಸಾಮಾನ್ಯ ಸಭೆ ನಡೆಸಿದ್ದು, ಇದೀಗ ಮೂರು ತಿಂಗಳು ಕಳೆದರೂ ಸಹ ಸಾಮಾನ್ಯ ಸಭೆ ಕರೆಯಲು ಮೇಯರ್ ಹಾಗೂ ಆಯುಕ್ತರು ಕ್ರಮ ಕೈಗೊಳ್ಳದಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದರು.

ಕರ್ನಾಟಕ ಪೌರ ನಿಗಮದ ಅಧಿನಿಯಮ 1976, ಅಧ್ಯಾಯ 3 ನೇ ನಿಯಮ, 2 ರ ಅಡಿಯಲ್ಲಿ ಮುಂದಿನ ಮೇಯರ್ ಆಯ್ಕೆ ಆಗುವವರೆಗೂ ಅಧಿಕಾರದಲ್ಲಿರಲು ಅವಕಾಶವಿದೆ. ಯಾವುದೇ ಸಬೂಬು ಹೇಳದೇ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು  ತುರ್ತಾಗಿ ಸಾಮಾನ್ಯ ಸಭೆ ನಡೆಸುವಂತೆ ಒತ್ತಾಯಿಸಿದರು.

ಕಳೆದ 8 ದಿನಗಳಿಂದ ಸರ್ವರ್ ಸಮಸ್ಯೆ ಎಂದು ಹೇಳುತ್ತಾ ಕಂದಾಯ ಶಾಖೆಯು ಸಾರ್ವಜನಿಕರ ಇ-ಆಸ್ತಿ ಪಡೆಯುವ ಮತ್ತು ಖಾತೆ ಬದಲಾವಣೆ ಕೆಲಸಗಳ ಅರ್ಜಿಗಳನ್ನು ವಿಲೇಪಡಿಸುವಲ್ಲಿ ವಿಳಂಬಮಾಡುತ್ತಿದೆ. ಮಳೆಗಾಲ ಪ್ರಾರಂಭವಾದರೂ ಸಹ ಮಳೆ ನೀರು ಚರಂಡಿಗಳ ಹೂಳು ಎತ್ತಲು ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ದೂರಿದರು.

ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ಜಲಸಿರಿ ಯೋಜನೆಯಡಿ ನೀರನ್ನು ಸರಿಯಾಗಿ ಸರಬರಾಜು ಮಾಡದಿದ್ದರೂ ಸಹ ನೀರಿನ ಬಿಲ್ ಪಾವತಿಸಲು ಬಿಲ್ ನೀಡುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಬೆಲೆ ಕೊಡದೇ ಜಲಸಿರಿ ಬಿಲ್ ನೀಡಿರುವುದು ಹಗಲು ದರೋಡೆಯೇ ಸರಿ. ಆಸ್ತಿ ತೆರಿಗೆಯನ್ನು ಅವೈಜ್ಞಾನಿಕವಾಗಿ ದುಪ್ಪಟ್ಟುಗೊಳಿಸಿರುವುದನ್ನು ಕಡಿಮೆ ಮಾಡುವಂತೆ ಒತ್ತಾಯ ಮಾಡುತ್ತಿರುವುದಕ್ಕೆ ಕಿವಿಗೊಡುತ್ತಿಲ್ಲ ಎಂದರು.

ಪ್ರಜಾಪ್ರಭುತ್ವವನ್ನು ಉಳಿಸುತ್ತೇವೆ ಎಂಬ ಹೇಳಿಕೆಯನ್ನು ನೀಡುತ್ತಾ ಇಂದು ಸದಸ್ಯರ ಅಧಿಕಾರವನ್ನು ಕಸಿದುಕೊಳ್ಳಲು ಹುನ್ನಾರ ನಡೆಸಿರುವುದು ಪ್ರಜಾತಂತ್ರದ ಕಗ್ಗೊಲೆ. ಜನ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಸ್ಪಂದಿಸದೇ ಇರುವುದು ಸರ್ವಾಧಿಕಾರಿ ಧೋರಣೆಯನ್ನು ಸೂಚಿಸುತ್ತದೆ. ಜಿಲ್ಲಾಧಿಕಾರಿಗಳಿಗೂ ಗಮನಕ್ಕೆ ತಂದು ಸಾಮಾನ್ಯ ಸಭೆ ನಡೆಸಲು ಆಯುಕ್ತರಿಗೆ ಸೂಚನೆ ನೀಡಲು ಆಗ್ರಹಿಸಿದ್ದೇವೆ ಎಂದರು.

ಮೇಯರ್ ತಮ್ಮ ಅಧಿಕಾರ ಚಲಾಯಿಸಿ ಸಾಮಾನ್ಯ ಸಭೆ ನಡೆಸಲಿ, ಇಲ್ಲವೇ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಪಾಲಿಕೆಯಲ್ಲಿ ಅಧಿಕಾರಿಗಳ ಅಟ್ಟಹಾಸ ನಡೆಯುತ್ತಿದ್ದು, ಅಧಿಕಾರಿಗಳಿಗೆ ಕಾನೂನು, ಜನಸಮಾನ್ಯರ ಹಾಗೂ ಜನಪ್ರತಿನಿಧಿಗಳ ಬಗ್ಗೆಯೂ ಭಯವಿಲ್ಲದಂತಾಗಿದೆ. ಇದರಿಂದಾಗಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮಹಾಪೌರರಾದ ಯಶೋಧ ಹೆಗ್ಗಪ್ಪ, ಆರ್. ಶಿವಾನಂದ್, ಶಿವಪ್ರಕಾಶ್, ಕೆ.ಎಂ. ವೀರೇಶ್, ಮುಖಂಡ ಸುರೇಶ್ ಗಂಡಗಾಳೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!