ನೀಟ್ ಪರೀಕ್ಷೆ ಅಕ್ರಮ: ವಿದ್ಯಾರ್ಥಿಗಳಿಗಾದ ಅನ್ಯಾಯ ಸರಿಪಡಿಸಲು ಆಮ್ ಆದ್ಮಿ ಒತ್ತಾಯ

ದಾವಣಗೆರೆ, ಜೂ. 13- ನೀಟ್ ಪರೀಕ್ಷೆಯ ಅಕ್ರಮದಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕೂಡಲೇ ಸರ್ಕಾರ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಡಬೇಕಾಗಿದೆ ಎಂದು  ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ‌ ಎಎಪಿ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮಗಳು ಕೇಳಿ ಬರುತ್ತಿದ್ದು, ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡಬೇಕು. ಪರೀಕ್ಷೆಯಿಂದ ರಾಜ್ಯಗಳಿಗೆ ಸಿಗಬೇಕಾದ ಶೇ.15 ರಷ್ಟು ಮೀಸಲಾತಿಯಲ್ಲಿ ತುಂಬಾ ಅನ್ಯಾಯವಾಗಿದೆ ಎಂದು ದೂರಿದರು.

ಒಂದೇ ಪರೀಕ್ಷಾ ಕೇಂದ್ರದಲ್ಲಿ 6 ಜನ ವಿದ್ಯಾರ್ಥಿಗಳು 720/720 ಅಂಕಗಳನ್ನು ಪಡೆದಿದ್ದಾರೆ. ತುಂಬಾ ಕಠಿಣ ಪರೀಕ್ಷೆಯಲ್ಲಿ ಇದು ಹೇಗೆ ಸಾಧ್ಯ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕನಸು ಕಮರಿ ಹೋಗಿದೆ. ನೊಂದು ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವ ಹೊಣೆ ಯಾರದು ? ಎಂದು ಪ್ರಶ್ನಿಸಿದರು.

ಪ್ರತಿ ಬಾರಿ 3-4 ವಿದ್ಯಾರ್ಥಿಗಳು ಟಾಪರ್ ಬರುತ್ತಿದ್ದರು. ಆದರೆ ಈ ಬಾರಿ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಾಪರ್‌ಗಳಾಗಿದ್ದಾರೆ. ಮಾಹಿತಿ ಪ್ರಕಾರ ಪರೀಕ್ಷೆಯನ್ನು ವೃತ್ತಿ ನಿರತ ಡಾಕ್ಟರ್‌ಗಳೇ ಬರೆದಿರುವ ಬಗ್ಗೆ ವರದಿಗಳು ಬಂದಿವೆ. ಪರೀಕ್ಷೆಗೂ ಮುನ್ನ ಪೇಪರ್ ಲೀಕ್‌ಔಟ್ ಆಗಿದೆ ಎಂದು ಹಲವು ವಿದ್ಯಾರ್ಥಿಗಳು ಆರೋಪಿಸಿದ್ದು, ಬೇರೆ ರಾಜ್ಯಗಳಲ್ಲಿ ಅರ್ಧ ಗಂಟೆ ತಡವಾಗಿ ಪೇಪರ್ ಬಂದಿದೆ. 60-70 ಗ್ರೇಸ್ ಮಾರ್ಕ್ಸ್ ಅಂಕಗಳನ್ನು ನೀಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಸರ್ಕಾರ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಹಾಗೂ ರಾಜ್ಯಗಳಿಗೆ ಅನುಕೂಲ ಆಗುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಎಪಿ ಪದಾಧಿಕಾರಿಗಳಾದ ಆದಿಲ್ ಖಾನ್, ರವೀಂದ್ರ, ವಿಕಾಸ್, ಸುರೇಶ್ ಶಿಡ್ಲಪ್ಪ ಉಪಸ್ಥಿತರಿದ್ದರು.

error: Content is protected !!