ಅಪ್ರತಿಮ ಕಲಾವಿದ ಜ್ಯೂನಿಯರ್ ವಿಷ್ಣುವರ್ಧನ್ ಟಿ. ಪರಮೇಶ್

ಅಪ್ರತಿಮ ಕಲಾವಿದ ಜ್ಯೂನಿಯರ್ ವಿಷ್ಣುವರ್ಧನ್ ಟಿ. ಪರಮೇಶ್

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ, ವಿಶಿಷ್ಟ ಅಭಿನಯದಿಂದ ಕೋಟ್ಯಾಂತರ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಚಿರಸ್ಥಾಯಿಯಾಗಿರುವ ವಿಷ್ಣುವರ್ಧನ್ ಅವರ ಹಾವಭಾವ, ನಡಿಗೆ, ನೃತ್ಯ, ಅಭಿನಯವನ್ನು ಯಥಾವತ್ತಾಗಿ ಪ್ರೇಕ್ಷಕರಿಗೆ ಉಣಬಡಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅಪರೂಪದ ಕಲಾವಿದ ದಾವಣಗೆರೆಯ ಜ್ಯೂನಿಯರ್ ವಿಷ್ಣುವರ್ಧನ್ ಟಿ. ಪರಮೇಶ್.  

ವೇದಿಕೆಯ ಮೇಲೆ ವಿಷ್ಣುವರ್ಧನ್‌ರವರ ಉಡುಪಿನಲ್ಲಿ ಪರಮೇಶ್ ಕಾಣಿಸಿಕೊಂಡಾಗ ಪ್ರೇಕ್ಷಕರಲ್ಲಿ ವಿದ್ಯುತ್ ಸಂಚಾರವಾಗುತ್ತದೆ. ವಿಷ್ಣುವರ್ಧನ್‌ರವರನ್ನು ಪ್ರತ್ಯಕ್ಷವಾಗಿ ನೋಡಿದಂತಹ ರೋಮಾಂಚನ ಪ್ರೇಕ್ಷಕರಲ್ಲಿ ಉಂಟಾಗುತ್ತದೆ. 

ಬಡತನದಲ್ಲಿಯೇ ಬೆಳೆದ ಪರಮೇಶ್ ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ವಿಷ್ಣುವರ್ಧನ್ ಅವರ ಕಟ್ಟಾಭಿಮಾನಿಯಾಗಿ, ಅವರ ಅಭಿನಯವನ್ನು ಪರಿಶ್ರಮಪಟ್ಟು ಮೈಗೂಡಿಸಿಕೊಂಡು  ಜ್ಯೂನಿಯರ್ ವಿಷ್ಣುವರ್ಧನ್ ಆಗಿದ್ದು ದಾವಣಗೆರೆಗೆ ಹೆಮ್ಮೆ.  ಪರಮೇಶ್ ಅವರ ಪ್ರತಿಭೆಯನ್ನು ಗುರುತಿಸಿ , ವಿವಿಧ ಸಂಘ- ಸಂಸ್ಥೆಗಳು ಅಂಬೇಡ್ಕರ್ ಪ್ರಶಸ್ತಿ, ಕಲಾಭೂಷಣ ಪ್ರಶಸ್ತಿ, ಕನ್ನಡ ಕುವರ ಪ್ರಶಸ್ತಿ, ಭಗೀರಥ ಪ್ರಶಸ್ತಿ ನೀಡಿ ಸನ್ಮಾನಿಸಿವೆ.

ಬೆಂಗಳೂರಿನ ಎಸ್.ಎಸ್. ಕಲಾ ಸಂಗಮ ಸಂಸ್ಥೆಯವರು ಪರಮೇಶ್ ಅವರಿಗೆ ಈಚೆಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ  ನೀಡಿ ಸನ್ಮಾನಿಸಿದ್ದಾರೆ.

ಪರಮೇಶ್ ಅವರ ಜನ್ಮಸ್ಥಳ ಚನ್ನಗಿರಿಯಾಗಿದ್ದು, ದಿ.  ತಿಪ್ಪೇಸ್ವಾಮಿ ಮತ್ತು ಕಮಲಮ್ಮ ದಂಪತಿ ಪುತ್ರನಾಗಿ ಪರಮೇಶ್ ಜನಿಸಿದರು. ದಾವಣಗೆರೆ ಜಿಲ್ಲಾ ವಾದ್ಯವೃಂದ ಕಲಾವಿದರ ಸಂಸ್ಥೆ ಅಧ್ಯಕ್ಷರಾಗಿರುವ ಅವರು, ದಾವಣಗೆರೆ ಫ್ರೆಂಡ್ಸ್ ಮೆಲೋಡಿ ಆರ್ಕೆಸ್ಟ್ರಾದ ಮಾಲೀಕರಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಗಣೇಶೋತ್ಸವ, ರಾಜ್ಯೋತ್ಸವ  ಮುಂತಾದ ಸಾಂಸೃತಿಕ ಕಾರ್ಯಕ್ರಮಗಳಲ್ಲಿ ಮನರಂಜನೆಯ ರಸದೌತಣವನ್ನು ಉಣಬಡಿಸುತ್ತಿದ್ದಾರೆ . ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಪರಮೇಶ್ ಜಿಲ್ಲೆ, ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದು, ಅವರ ಹೆಸರು ರಾಷ್ಟ್ರಮಟ್ಟದಲ್ಲಿಯೂ ಹರಡಲಿ.


– ಬಕ್ಕೇಶ ನಾಗನೂರು

error: Content is protected !!