ಹೆಚ್ಚಿನ ಮೂಲ ಸೌಕರ್ಯ ಒದಗಿಸಲು ರೈಲ್ವೆ ಪ್ರಯಾಣಿಕರ ಸಂಘ ಆಗ್ರಹ

ದಾವಣಗೆರೆ, ಮೇ 24- ದಾವಣಗೆರೆ ರೈಲು ನಿಲ್ದಾಣದಲ್ಲಿ ಹೆಚ್ಚಿನ ಮೂಲ ಸೌಕರ್ಯ ಒದಗಿಸಬೇಕೆಂದು ನೈರುತ್ಯ ರೈಲ್ವೆ ವಲಯದ ಪ್ರಯಾಣಿಕರ ಸಂಘವು ಮೈಸೂರು ವಿಭಾಗಕ್ಕೆ ಒತ್ತಾಯಿಸಿದೆ.

ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರೈಲ್ವೆ ನಿಲ್ದಾಣಗಳಲ್ಲಿ ದಾವಣಗೆರೆ ನಿಲ್ದಾಣ 2ನೇ ಅತೀ ಹೆಚ್ಚು ಆದಾಯ ಗಳಿಸಿ ಕೊಡುವ ನಿಲ್ದಾಣವಾಗಿದ್ದು, ಇಲ್ಲಿನ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯವನ್ನು ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗ ಕೃಪೆ ತೋರಬೇಕೆಂದು ಆಗ್ರಹಿಸಿದೆ.

ದಿನಕ್ಕೆ 35ಕ್ಕೂ ಅಧಿಕ ಎಕ್ಸ್‌ಪ್ರೆಸ್‌ ರೈಲುಗಳು ಹಾಗೂ ಸುಮಾರು 20 ಗೂಡ್ಸ್‌ ಗಾಡಿಗಳು ನಿತ್ಯವೂ ದಾವಣಗೆರೆ ಮಾರ್ಗವಾಗಿ ಸಂಚರಿಸುತ್ತವೆ. ಆದ್ದರಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಟ್ರೋಲಿ ಪಾತ್, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಬ್ಯಾಟರಿ ಚಾಲಿತ ಕಾರ್, ಶುಚಿ-ರುಚಿಯಾದ ಊಟ ಹಾಗೂ ತಿಂಡಿ ಪೂರೈಸುವ ಕ್ಯಾಂಟೀನ್ ಮತ್ತು ಸೆಲ್ಫಿ ಪಾಯಿಂಟ್‌ ತೆರೆಯಲು ಮನವಿ ಮಾಡಿದ್ದಾರೆ.

ಬೆಂಗಳೂರು ಕಡೆಗೆ ಹೋಗುವ ರೈಲಿಗೆ ಟಿಕೆಟ್ ಪಡೆಯಲು ಪ್ರಯಾಣಿಕರು ನಿತ್ಯವೂ ಹರಸಾಹಸ ಪಡುತ್ತಿ ದ್ದಾರೆ. ಆದ್ದರಿಂದ ರೈಲು ಬರುವ ವೇಳೆ ಹೆಚ್ಚಿನ ಟಿಕೆಟ್‌ ಕೌಂಟರ್‌ ವ್ಯವಸ್ಥೆ ಹಾಗೂ ಪ್ರಯಾಣಿಕರಿಗೆ ಕೂರಲು ಬೆಂಚಿನ ವ್ಯವಸ್ಥೆ ದ್ವಿಗುಣಗೊಳಿಸಬೇಕು ಎಂದಿದ್ದಾರೆ.

ಎಕ್ಸ್‌ಪ್ರೆಸ್‌ ಹಾಗೂ ಪ್ಯಾಸೆಂಜರ್ ರೈಲು ನಿಲ್ಲುವಿಕೆಯ ಸಮಯವನ್ನು 5ರಿಂದ 10 ನಿಮಿಷಕ್ಕೆ ಹೆಚ್ಚಿಸುವುದು. ಬೆಂಗಳೂರು – ಗಾಂಧಿಧಾಮ್‌ ರೈಲು ಗಾಡಿಯನ್ನು ಭುಜ್  ವರೆಗೆ ವಿಸ್ತರಿಸಿ ವಾರಕ್ಕೆ 3 ಸಲ ಓಡಿಸಬೇಕೆಂದು ಸಂಘದ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

error: Content is protected !!