ದಾವಣಗೆರೆ, ಮೇ 24- ತಂದೆ, ತಾಯಿ ಹಾಗೂ ಎರಡು ವರ್ಷದ ಮಗು ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣ ತಿರುವು ಪಡೆದುಕೊಂಡಿದ್ದು, ಇದೀಗ ಕಾಣೆಯಾಗಿರುವ ಯುವತಿ ತಾವು ಸುರಕ್ಷಿತವಾಗಿರುವುದಾಗಿ ಹೇಳಿದ್ದಾಳೆ.
ವಿನೋಬನಗರ 1ನೇ ಮೇನ್, 7ನೇ ಕ್ರಾಸ್‌ನಲ್ಲಿ ವಾಸವಾಗಿದ್ದ 34 ವರ್ಷದ ಅಂಜನ್ ಬಾಬು, 24 ವರ್ಷದ ನಾಗವೇಣಿ, ಎರಡು ವರ್ಷದ ನಕ್ಷತ್ರ ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸಂಜೆ ಆರು ಗಂಟೆಗೆ ನಾಗವೇಣಿ ಗಂಡ ಅಂಜನ್ ಬಾಬು ಪತ್ನಿಗೆ ಫೋನ್ ಮಾಡಿದ್ದಾರೆ. ಆಗ ತನ್ನ ಪುತ್ರಿ ಜೊತೆ ನಾಗವೇಣಿ ತೆರಳಿದ್ದಾಳೆ. ಆ ಬಳಿಕ ತಾಯಿಗೆ ನೀನು ಮನೆಯಲ್ಲಿ ಇರು ಎಂದು ಹೇಳಿದ್ದಾಳೆ. ಅದಕ್ಕೆ ನಿನ್ನ ಗಂಡ ಎಲ್ಲಿಗೆ ಹೋಗಿದ್ದಾನೆಂದು ತಾಯಿ ಕೇಳಿದ್ದಕ್ಕೆ, ಕರೆದುಕೊಂಡು ಬಂದ ಮೇಲೆ ಹೇಳುತ್ತೇನೆಂದು ತನ್ನ ಮಗಳು ನಕ್ಷತ್ರಾಳನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಾಗವೇಣಿ ತಾಯಿ ರುದ್ರಮ್ಮ ವಿವರಿಸಿದ್ದಾರೆ.
ಇದೀಗ ಕಾಣೆಯಾದ ನಾಗವೇಣಿಯು `ನಾನು, ನನ್ನ ಗಂಡ ಅಂಜನ್ ಬಾಬು ಹಾಗೂ ನನ್ನ ಮಗಳು ನಕ್ಷತ್ರ ಒಂದು ಜಾಗದಲ್ಲಿ ಸುರಕ್ಷಿತವಾಗಿದ್ದು, ನಾವು ನಮ್ಮ ವೈಯಕ್ತಿಕ ಕಾರಣಗಳಿಂದ ಮಾನಸಿಕವಾಗಿ ನೊಂದು ಕುಟುಂಬ ಸಮೇತ ಮನೆ ಬಿಟ್ಟು ಬಂದಿರುತ್ತೇವೆ. ಸ್ವಲ್ಪ ದಿನಗಳ ಬಳಿಕ ದಾವಣಗೆರೆಗೆ ಹಿಂದಿರುಗುತ್ತೇವೆ. ಅಲ್ಲಿಯ ತನಕ ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ತಿಳಿಸಿರುವುದಾಗಿ ತಾಯಿ ರುದ್ರಮ್ಮ ಬಡಾವಣೆ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ.