ಬಾಳೆಹೊನ್ನೂರು, ಮೇ 19- ಹಿರಿಯ ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಸ್ಚಂದ್ರ ಭೋಸ್ ಟ್ರಸ್ಟಿನ ಹಿಂದಿನ ಅಧ್ಯಕ್ಷರಾದ ವೇ. ವೀರಯ್ಯಸ್ವಾಮಿ ಶಾಸ್ತ್ರಿಮಠ ಅವರ ಅಗಲಿಕೆಗೆ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಬೆಂಗಳೂರಿನ ರಾಜಾಜಿ ನಗರದಲ್ಲಿ ಶ್ರೀ ಜಗದ್ಗುರು ದಾರುಕಾಚಾರ್ಯರ ಆಶ್ರಮ, ದಾರುಕಾಚಾರ್ಯರ ವಿಗ್ರಹ ಸ್ಥಾಪಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಿ ತ್ರಿಕಾಲ ಪೂಜೆ ಸಲ್ಲಿಸುತ್ತಿದ್ದ ಅತ್ಯಂತ ಹಿರಿಯ ಅಧ್ಯಾತ್ಮಿಕ ಶಕ್ತಿ ಇವರಾಗಿದ್ದರು. ಇವರ ಆಧ್ಯಾತ್ಮಿಕ ಸಾಧನೆಯನ್ನು ಮೆಚ್ಚಿದ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು `ಅಂತರ್ ಜ್ಯೋತಿಷಿ’ ಬಿರುದು ಪ್ರದಾನ ಮಾಡಿದ್ದರು. ಶ್ರೀಲಂಕಾದ ಜಾಫ್ನಾದಲ್ಲಿರುವ ರೇಣುಕಾಶ್ರಮಕ್ಕೆ ಹೋಗಿ ಅಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಐತಿಹ್ಯಗಳನ್ನು ಅಭ್ಯಾಸ ಮಾಡಿದವರಾಗಿದ್ದರು.
ಸನಾತನ ಧರ್ಮದ ಗುರು ಪರಂಪರೆಯ ಶಕ್ತಿಯನ್ನು ಸಾರುವುದರೊಂದಿಗೆ ಸದಾ ಧರ್ಮ ಜಾಗೃತಿ ಮಾಡುತ್ತಾ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಿದ್ದ ಶತಾಯುಷಿ ವೀರಯ್ಯಸ್ವಾಮಿ ಶಾಸ್ತ್ರಿಮಠರ ಅಗಲಿಕೆ ಆಧ್ಯಾತ್ಮ ಲೋಕಕ್ಕೆ ಹಾನಿ ಉಂಟು ಮಾಡಿದೆ ಎಂದು ಜಗದ್ಗುರುಗಳು ತಿಳಿಸಿದ್ದಾರೆ.