ದಾವಣಗೆರೆ, ಏ.23 – ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದೇಶದ ಮೂರನೇ ಹಂತ, ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ದಾವಣಗೆರೆ ಕ್ಷೇತ್ರದಲ್ಲಿ ಮನೆಯಲ್ಲಿಯೇ ಮತದಾನ ಮಾಡುವ ಪ್ರಕ್ರಿಯೆಯು ನಾಡಿದ್ದು ದಿನಾಂಕ 25 ರಿಂದ 27 ರ ವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ದಿನಾಂಕ 25 ರಿಂದ 27 ರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮತಪತ್ರದ ಮೂಲಕ ಗೃಹ ಮತದಾನ ನಡೆಯಲಿದ್ದು, ಮತದಾನ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಇದೇ ದಿನಾಂಕ 27 ರಂದು ಕೊನೆಯ ಭೇಟಿ ನೀಡಿ ಮನೆಯಲ್ಲಿಯೇ ಮತದಾನ ಮಾಡಿಸಲಾಗುತ್ತದೆ. ಮನೆಯಲ್ಲಿಯೇ ಮತದಾನಕ್ಕೆ ಪ್ರತಿ ಮಾರ್ಗಕ್ಕೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಮತ್ತು ಪೂರಕ ಸದಸ್ಯರನ್ನು ಒಳಗೊಂಡ ತಂಡ ಮನೆಗೇ ಬಂದು ಮತದಾನ ಮಾಡಿಸಲಿದೆ. ಮತದಾನದ ವೇಳೆ ಮತದಾನದ ಪಾವಿತ್ರ್ಯತೆಯೊಂದಿಗೆ ಗೌಪ್ಯತೆಗೆ ಧಕ್ಕೆಯಾಗದಂತೆ ಕ್ರಮ ವಹಿಸಲಾಗುತ್ತದೆ. ಈ ದಿನಗಳಂದು ಮನೆಯಲ್ಲಿಯೇ ಇದ್ದು ಮತದಾನ ಮಾಡಬೇಕೆಂದು ಜಿಲ್ಲಾಧಿಕಾರಿ ಕೋರಿದ್ದಾರೆ.
ಮನೆಯಲ್ಲಿಯೇ ಮತದಾನದ ವಿವರ : ದಾವಣಗೆರೆ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 12845 ಮತದಾರರಿದ್ದು, ಇದರಲ್ಲಿ ಮನೆಯಲ್ಲಿಯೇ ಮತದಾನ ಮಾಡಲು 1458 ಹಿರಿಯ ನಾಗರಿಕರು ಒಪ್ಪಿಗೆ ನೀಡಿದ್ದಾರೆ. ಮತ್ತು 22922 ವಿಶೇಷಚೇತನ ಮತದಾರರಲ್ಲಿ 804 ಮತದಾರರು ಮನೆಯಲ್ಲಿಯೇ ಮತದಾನ ಮಾಡಲು ಒಪ್ಪಿಗೆ ನೀಡಿದ್ದು ಇವರಿಗೆ ಮತದಾನ ಮಾಡಿಸಲಾಗುತ್ತದೆ. ಈಗಾಗಲೇ ಒಪ್ಪಿಗೆ ನೀಡಿದ ಮತದಾರರು ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ಇರುವುದಿಲ್ಲ.
ಮನೆಯಲ್ಲಿ ಮತದಾನದ ಕ್ಷೇತ್ರವಾರು ವಿವರ : ಹಿರಿಯ ನಾಗರಿಕರು 85 ವರ್ಷ ಮೇಲ್ಪಟ್ಟು ಜಗಳೂರು 202, ಹರಪನಹಳ್ಳಿ 163, ಹರಿಹರ 123, ದಾವಣಗೆರೆ ಉತ್ತರ 264, ದಕ್ಷಿಣ 100, ಮಾಯಕೊಂಡ 16, ಚನ್ನಗಿರಿ 204, ಹೊನ್ನಾಳಿ 386 ಸೇರಿ 1458,
ವಿಶೇಷಚೇತನರು : ಜಗಳೂರು 119, ಹರಪನಹಳ್ಳಿ 75, ದಾವಣಗೆರೆ ಉತ್ತರ 112, ದಕ್ಷಿಣ 88, ಮಾಯಕೊಂಡ 6, ಚನ್ನಗಿರಿ 98, ಹೊನ್ನಾಳಿ 230 ಸೇರಿ ಒಟ್ಟು 804 ಮತದಾರರು ಮನೆಯಲ್ಲಿ ಮತದಾನ ಮಾಡಲು 12ಡಿ ರಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.