ದಾವಣಗೆರೆ, ಮಾ.31- ದಲಿತ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿರುವ ಕಾಂಗ್ರೆಸ್, ದಲಿತ ಸಮುದಾಯವನ್ನು ವಂಚಿಸುತ್ತಲೇ ಬಂದಿದೆ ಎಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತ ನಾಯ್ಕ ಆರೋಪಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತ ವಿರೋಧಿ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ನೆಹರೂ ಅವರು ಮೀಸಲಾತಿಯನ್ನು ವಿರೋಧಿಸಿದ್ದರು. ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿ, ಅವರ ಎದುರು ಗೆದ್ದವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಕಾಂಗ್ರೆಸ್ ದಲಿತ ವಿರೋಧಿ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಎಂದರು.
ಬಿಜೆಪಿ ಮುಖಂಡ ಆಲೂರು ನಿಂಗರಾಜ್ ಮಾತನಾಡಿ, ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಎಸ್ಸಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಹೆಚ್ಚಿಸಿರುವ ಮೀಸಲಾತಿಯನ್ನು ನೀಡದೇ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಿ.ಎಂ. ಸತೀಶ್, ಬಿ.ಟಿ. ಸಿದ್ದಪ್ಪ, ಶಾಮನೂರು ರಾಜು, ರವಿ ನಾಯ್ಕ, ಬಿ. ವಿಠ್ಠಲ್. ಕಬ್ಬಳ್ಳಿ ಪರಸಪ್ಪ, ದಂಡಪಾಣಿ, ಶಿವಾನಂದ್ ಇದ್ದರು.