ಐದು ಬಂಗಾರ ಗಳಿಸಿದ ದೀಪ್ತಿ ಜೆ. ಗೌಡರ್ ಸಾಧನೆಯ ಗುಟ್ಟು
ದಾವಣಗೆರೆ, ಮಾ. 11 – ಪರೀಕ್ಷೆಯಲ್ಲಿ ಎಷ್ಟು ಅಂಕ ಬರಲಿದೆ ಎಂಬುದರ ಬಗ್ಗೆ ಚಿಂತೆ ಮಾಡದೇ, ಪ್ರತಿದಿನ ಕಲಿಯಬೇಕಾದ ಪಾಠಗಳ ಬಗ್ಗೆ ನಿರಂತರ ಗಮನ ಹರಿಸುತ್ತಿದ್ದುದೇ ರಾಂಕ್ ಗಳಿಕೆಗೆ ನೆರವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾ ಲಯದಲ್ಲಿ ಎಂ.ಕಾಂ.ನ ವಾಣಿಜ್ಯ ಶಾಸ್ತ್ರದಲ್ಲಿ ಐದು ಬಂಗಾರದ ಪಡೆದಿರುವ ನಗರದ ದೀಪ್ತಿ ಜೆ. ಗೌಡರ್ ಹೇಳಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ನನಗೆ ರಾಂಕ್ ಗಳಿಸುವ ಗುರಿಯೇನೂ ಇರಲಿಲ್ಲ. ಆದರೆ, ಅಧ್ಯಯನದ ಕಡೆ ಆಸಕ್ತಿ ಇತ್ತು. ತರಗತಿಯಲ್ಲಿ ಪಾಠಗಳನ್ನು ಶ್ರದ್ಧೆಯಿಂದ ಆಲಿಸುತ್ತಿದ್ದೆ. ಇದರ ಜೊತೆಗೆ, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಅತ್ಯುತ್ತಮ ಸಹಕಾರ ನೀಡುತ್ತಿದ್ದರು ಎಂದವರು ಹೇಳಿದ್ದಾರೆ.
ಕುಟುಂಬದವರು ಹಾಗೂ ಸ್ನೇಹಿತರು ನಿರಂತರವಾಗಿ ಅಧ್ಯಯನಕ್ಕೆ ಸಹಕಾರ ನೀಡುತ್ತಿದ್ದರು. ಪ್ರಸಕ್ತ ನಗರದ ಆರ್.ಜಿ. ಪಿ.ಯು.ಸಿ. ಕಾಲೇಜಿನಲ್ಲಿ ಬೋಧಕಿಯಾಗಿದ್ದೇನೆ. ಪ್ರಾಧ್ಯಾಪಕಿಯಾಗುವ ಗುರಿಯೊಂದಿಗೆ ನೆಟ್ ಹಾಗೂ ಸೈಟ್ ಪರೀಕ್ಷೆಯ ಸಿದ್ಧತೆಯಲ್ಲಿದ್ದೇನೆ ಎಂದವರು ಹೇಳಿದ್ದಾರೆ.
ವಿದ್ಯಾರ್ಥಿನಿಯರಿಗೆ ಸಿಂಹಿಣಿ ಪಾಲು!
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿಯೂ ಫಲಿತಾಂಶ ಹಾಗೂ ಚಿನ್ನದ ಪದಕಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ.
ಸ್ನಾತಕ ಹಂತದಲ್ಲಿ ಪರೀಕ್ಷೆಗೆ ಹಾಜರಾದ ಪುರುಷ ವಿದ್ಯಾರ್ಥಿಗಳಲ್ಲಿ ಶೇ.67.17ರಷ್ಟು ಫಲಿತಾಂಶ ದೊರೆತಿದೆ. ಮಹಿಳಾ ವಿದ್ಯಾರ್ಥಿಗಳ ಫಲಿತಾಂಶ ಶೇ.83ರಷ್ಟಿದೆ.
ಸ್ನಾತಕೋತ್ತರ ಹಂತದಲ್ಲಿ ಪುರುಷ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ.94.53ರಷ್ಟಿದ್ದರೆ, ಮಹಿಳಾ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ.97ರಷ್ಟಿದೆ.
ಪದಕಗಳ ವಿಭಾಗದಲ್ಲೂ ಮಹಿಳೆಯರೇ ಮುಂಚೂಣಿ ಯಲ್ಲಿದ್ದಾರೆ. ಸ್ನಾತಕ ಹಂತದಲ್ಲಿ 10 ಹಾಗೂ ಸ್ನಾತಕೋತ್ತರ ಹಂತದಲ್ಲಿ 29 ಮಹಿಳೆಯರು ಪದಕ ಪಡೆದಿದ್ದಾರೆ.
ಸ್ನಾತಕ ಹಂತದಲ್ಲಿ ಇಬ್ಬರು ಹಾಗೂ ಸ್ನಾತಕೋತ್ತರ ಹಂತದಲ್ಲಿ ನಾಲ್ವರು ಪುರುಷರು ಮಾತ್ರ ಪದಕ ಪಡೆದಿದ್ದಾರೆ.
ದಾವಣಗೆರೆ ವಿ.ವಿ.ಯಲ್ಲಿ ಅಧ್ಯಯನ ಮಾಡಿದ ಡಿ. ರೇವಣಸಿದ್ದಪ್ಪ ಕನ್ನಡ ಎಂ.ಎ. ವಿಭಾಗದಲ್ಲಿ ಎರಡು ಪದಕ ಗಳಿಸಿದ್ದಾರೆ. ಜಗಳೂರು ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ದುರುಗಪ್ಪ ಹಾಗೂ ರತ್ನಮ್ಮ ದಂಪತಿ ಪುತ್ರರಾಗಿರುವ ಅವರು, ರೈತಾಪಿ ಹಿನ್ನೆಲೆಯವರು.
ಕನ್ನಡ ವಿಷಯದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಹೀಗಾಗಿ ಈ ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ ಸಿದ್ಧತೆ ನಡೆಸಿದ್ದೇನೆ. ಇತ್ತೀಚೆಗೆ ನಡೆದ ಎನ್.ಇ.ಟಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ ಎಂದು ಹೇಳಿದರು.
ಎಂ.ಎ. ಅರ್ಥಶಾಸ್ತ್ರದಲ್ಲಿ ಮೂರು ಪದಕ ಗಳಿಸಿರುವ ಮಾಯಕೊಂಡದ ಎಂ.ವೈ. ಚಂದನ ಮಾತನಾಡಿ, ಕುಟುಂಬದವರು ಹಾಗೂ ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿಯ ಸಹಕಾರ ಸ್ಮರಿಸಿದ್ದಾರೆ.
ಮೊದಲ ಸೆಮಿಸ್ಟರ್ನಲ್ಲಿ ಉತ್ತಮ ಅಂಕ ದೊರೆತಾಗಿನಿಂದಲೂ ರಾಂಕ್ ಗುರಿ ಇತ್ತು. ಈಗ ಮೊದಲ ರಾಂಕ್ ದೊರೆತಿರುವುದು ತಮ್ಮ ತಂದೆ ಏಳುಕೋಟೆ ಹಾಗೂ ತಾಯಿ ಶಶಿಕಲಾ ಅವರಿಗೆ ಅಪಾರ ಸಂತೋಷ ತಂದಿದೆ ಎಂದರು.
ಅರ್ಥಶಾಸ್ತ್ರದ ಅಧ್ಯಯನಕ್ಕಾಗಿ ಹಲವಾರು ಪುಸ್ತಕಗಳ ಅಧ್ಯಯನ ಮಾಡಬೇಕಾಯಿತು. ಒಂದೇ ಪುಸ್ತಕದಲ್ಲಿ ಎಲ್ಲಾ ಮಾಹಿತಿ ಸಿಗುವುದಿಲ್ಲ. ಇಂಟರ್ನೆಟ್ ಅವಲಂಬನೆ ಅನಿವಾರ್ಯವಾಗಿತ್ತು. ಬೋಧಕ ಸಿಬ್ಬಂದಿ ಅಧ್ಯಯನಕ್ಕೆ ನೆರವಾಗಿದ್ದಾರೆ ಎಂದರು.