ಇಂದು ದಾ.ವಿ.ವಿ. ಘಟಿಕೋತ್ಸವ

ದಾವಣಗೆರೆ, ಮಾ. 11 –  ದಾವಣಗೆರೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭ ನಾಳೆ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದಲ್ಲಿ ನೆರವೇರಲಿದ್ದು, 14,357 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 32 ಪುರುಷ ಹಾಗೂ 32 ಮಹಿಳಾ ಅಭ್ಯರ್ಥಿಗಳು ಸೇರಿ 64 ಜನರಿಗೆ ಪಿ.ಹೆಚ್.ಡಿ. ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಕಳೆದ ವರ್ಷ ಸ್ನಾತಕ ಪದವಿಯಲ್ಲಿ ಒಟ್ಟು 16,140 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 12,265 ವಿದ್ಯಾರ್ಥಿಗಳು (ಶೇ.75.99) ಉತ್ತೀರ್ಣರಾಗಿದ್ದಾರೆ. ಇವರಲ್ಲಿ 4,977 ಪುರುಷ ಮತ್ತು 7,288 ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಒಟ್ಟು 9 ವಿದ್ಯಾರ್ಥಿಗಳು ಪ್ರಥಮ ರಾಂಕ್ ಪಡೆದಿದ್ದರೆ, 12 ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿದ್ದಾರೆ. 20 ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ರಾಂಕ್ ಗಳಿಸಿದ್ದಾರೆ ಎಂದು ಹೇಳಿದರು.

ಸ್ನಾತಕೋತ್ತರ ಪದವಿ ಪರೀಕ್ಷೆಗೆ ಒಟ್ಟು 2177 ವಿದ್ಯಾರ್ಥಿಗಳು ಹಾಜರಾಗಿದ್ದು, 2092 ವಿದ್ಯಾರ್ಥಿಗಳು (ಶೇ.96.09) ತೇರ್ಗಡೆಯಾಗಿದ್ದಾರೆ. ಇವರಲ್ಲಿ 778 ವಿದ್ಯಾರ್ಥಿಗಳು ಮತ್ತು 1314 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಸ್ನಾತಕೋತ್ತರ ಪದವಿಗೆ ಭಾಜನರಾಗಿದ್ದಾರೆ. ಒಟ್ಟು 30 ವಿದ್ಯಾರ್ಥಿಗಳು ಪ್ರಥಮ ರಾಂಕ್ ಗಳಿಸಿದರೆ, 33 ವಿದ್ಯಾರ್ಥಿಗಳು ಸ್ವರ್ಣ ಪದಕ ಪಡೆದಿದ್ದಾರೆ. 51 ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ರಾಂಕ್‌ ಪಡೆದಿದ್ದಾರೆ ಎಂದು ಕುಂಬಾರ ತಿಳಿಸಿದರು.

ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ನ್ಯಾಯಮೂರ್ತಿ ಶಿವರಾಜ ಪಾಟೀಲ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ವ್ಯಂಗ್ಯಚಿತ್ರಕಾರ ಹೆಚ್.ಬಿ.ಮಂಜುನಾಥ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಗುವುದು ಎಂದವರು ಹೇಳಿದರು.

ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ  ಥಾವರ್‍ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ  ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಂಬಾರ ಹೇಳಿದರು.

ಏಕರೂಪ ಶುಲ್ಕ : ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಶುಲ್ಕ ಹಾಗೂ ಶಿಕ್ಷಕರ ಭತ್ಯೆ ಏಕರೂಪಗೊಳಿಸಲು ಕುಲಪತಿಗಳ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗಿದೆ. ವರದಿ ಆಧರಿಸಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಏಕರೂಪದ ಶುಲ್ಕ ಜಾರಿಗೆ ಬರಲಿದೆ ಎಂದು ಕುಂಬಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೌಶಲ್ಯ ತರಬೇತಿ : ಪದವಿ ವಿದ್ಯಾರ್ಥಿಗಳಿಗೆ ಬರುವ ಏಪ್ರಿಲ್ 2ರಿಂದ ಕೌಶಲ್ಯ ತರಬೇತಿ ನೀಡಲಾಗುವುದು. 30 ಸಾವಿರ ವಿದ್ಯಾರ್ಥಿಗಳು ಈ ತರಬೇತಿ ಪಡೆಯಲಿದ್ದಾರೆ. ಕೌಶಲ್ಯದ ತರಬೇತಿ ಹಾಗೂ ಪಠ್ಯವನ್ನು ಉದ್ಯಮಿಗಳೇ ನಿರ್ಧರಿಸಲಿದ್ದಾರೆ ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ ತಿಳಿಸಿದರು.

ದಾವಣಗೆರೆ, ತುಮಕೂರು ಹಾಗೂ ರಾಯಚೂರು ವಿಶ್ವವಿದ್ಯಾಲಯಗಳಲ್ಲಿ ಈ ವರ್ಷ ಪ್ರಾಯೋಗಿಕವಾಗಿ ತರಬೇತಿ ಆರಂಭಿಸಲಾಗಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ವೆಂಕಟರಾವ್ ಎಂ.ಪಲಾಟೆ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ತಮ್ಮನಗೌಡ್ರ, ವಿವಿಧ ನಿಕಾಯಗಳ ಡೀನರಾದ ಪ್ರೊ.ಯು.ಎಸ್.ಮಹಾಬಲೇಶ್ವರ, ಪ್ರೊ.ಆರ್.ಶಶಿಧರ, ಪ್ರೊ.ಕೆ.ವೆಂಕಟೇಶ ಉಪಸ್ಥಿತರಿದ್ದರು.

error: Content is protected !!