ತುಮಕೂರು, ಫೆ.29 – ಬಹಳ ವರ್ಷಗಳ ನಂತರ ಜಯಪ್ರಕಾಶ್ ಹೆಗಡೆ ಅವರ ವರದಿಯನ್ನು ತರಾತುರಿಯಲ್ಲಿ ಇಂದು ಸ್ವೀಕಾರ ಮಾಡಿದ್ದು, ಯೋಗ್ಯವಾದ ನಿರ್ಣಯವಲ್ಲ ಎಂದು ಗುರುವಾರ ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.
ಜಾತಿ ಜನಗಣತಿಯನ್ನು ನಾವ್ಯಾರೂ ವಿರೋಧಿಸಲ್ಲ. ಆದರೆ, ವೀರಶೈವ ಲಿಂಗಾಯತ ಸಮುದಾಯವಾಗಲೀ, ಒಕ್ಕಲಿಗ ಸಮುದಾಯದಲ್ಲಾಗಲೀ ಸರಿಯಾಗಿ ವೈಜ್ಞಾನಿಕವಾಗಿ ಜನಗಣತಿ ನಡೆದಿರುವುದಿಲ್ಲ. ಕೆಲವೇ ಕೆಲವು ಮಾಹಿತಿಗಳನ್ನು ಆಧರಿಸಿ, ಕಾಂತರಾಜ ವರದಿ ಸಿದ್ಧವಾಗಿದೆ. ಈಗಾಗಲೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಾಗಲೀ, ಈ ನಾಡಿನ ಪೀಠ ಮಠಗಳಾಗಲೀ ವೈಜ್ಞಾನಿಕವಾಗಿ ಜಾತಿ ಜನಗಣತಿ ನಡೆಯಲಾರದೇ ಇರುವುದಕ್ಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ಎಲ್ಲರಿಗೂ ಗೊತ್ತಿದೆ. ಪ್ರತಿಯೊಂದು ಜಾತಿ ಜನಗಣತಿಯನ್ನು ಪ್ರಾಮಾಣಿಕವಾಗಿ, ಸತ್ಯವಾಗಿ ಗುರುತಿಸಿ, ಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳನ್ನು ಒದಗಿಸಬೇಕೆಂಬ ಉದ್ದೇಶವೇ ಹೊರತು ಬೇರೇನೂ ಅಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ಅವಸರದಲ್ಲಿ ಈ ವರದಿಯನ್ನು ಸ್ವೀಕಾರ ಮಾಡಿ ಕಾರ್ಯಗತಗೊಳಿಸಿದರೆ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಆಡಳಿತರೂಡ ಕಾಂಗ್ರೆಸ್ ಪಕ್ಷ ಅನುಭವಿಸಲಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಎಚ್ಚರಿಸಿದ್ದಾರೆ.