ದಾವಣಗೆರೆ, ಜ. 9 – ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೊದಲ ನಾಲ್ಕು ಯೋಜನೆಗಳು ಭರ್ಜರಿ ಭರಾಟೆಯ ಆರಂಭ ಕಂಡು ಸುದ್ದಿ ಮಾಡಿದ್ದವು.
ಆದರೆ, ಐದನೇ ಗ್ಯಾರಂಟಿಯಾದ ಯುವನಿಧಿ ಶಾಂತ ರೀತಿಯಲ್ಲಿ ನೋಂದಣಿ ಕಾಣುತ್ತಿದೆ. ಮೊದಲ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಮುನ್ನುಗ್ಗುವವರನ್ನು ನಿಭಾಯಿಸಲು ಸರ್ಕಾರ ಕಷ್ಟಪಡಬೇಕಾಯಿತು. ಆದರೆ, ಯುವ ನಿಧಿಯಲ್ಲಿ ಮಾತ್ರ ಸರ್ಕಾರಿ ಮಂದಿಯೇ ನೋಂದಣಿ ಹೆಚ್ಚಿಸಲು ಪ್ರಚಾರ ಅಭಿಯಾನಕ್ಕೆ ಮುಂದಾಗಿದ್ದಾರೆ.
ಕಳೆದ ಡಿಸೆಂಬರ್ 26ರಿಂದ ಯುವ ನಿಧಿ ಯೋಜನೆಗೆ ನೋಂದಣಿ ಆರಂಭಿಸಲಾಗಿತ್ತು. ಈ ಯೋಜನೆ ಯಡಿ ಡಿಪ್ಲೋಮಾ ಹಾಗೂ ಪದವಿ ಪೂರೈಸಿದ ನಂತರ ಆರು ತಿಂಗಳವರೆಗೆ ನಿರುದ್ಯೋಗಿಗಳಾಗಿರುವವರಿಗೆ ಯುವನಿಧಿ ಮೂಲಕ ಎರಡು ವರ್ಷಗಳವರೆಗೆ ಸರ್ಕಾರದಿಂದ ಹಣ ನೀಡಲಾಗುತ್ತದೆ.
ಜನವರಿ 12ರ ಶುಕ್ರವಾರದಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಯುವ ನಿಧಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಯೋಜನೆಗೆ ಚಾಲನೆ ದಿನ ಹತ್ತಿರವಾದರೂ ನೋಂದಣಿಯಲ್ಲಿ ಉತ್ಸಾಹ ಕಂಡು ಬಂದಿಲ್ಲ. ಇತ್ತೀಚೆಗೆ ಜನವರಿ 9ರಂದು ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಜಿಲ್ಲೆಯಲ್ಲಿ 1,944 ಜನರು ಮಾತ್ರ ಯುವ ನಿಧಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.
2023ರಲ್ಲಿ ಜಿಲ್ಲೆಯ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಂದ ಪಡೆದಿರುವ ಮಾಹಿತಿ ಪ್ರಕಾರ, 8,852 ವಿದ್ಯಾರ್ಥಿಗಳು ಪದವಿ ಹಾಗೂ ಡಿಪ್ಲೋಮಾ ಪಡೆದಿದ್ದಾರೆ. ಇವರಲ್ಲಿ 4,299 ಪುರುಷ ಹಾಗೂ 4,553 ಮಹಿಳೆಯರಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ 895 ಯುವಕ – ಯುವತಿಯರು ನೋಂದಾಯಿತರಾಗಿದ್ದಾರೆ. ಚನ್ನಗಿರಿಯಲ್ಲಿ 319, ಹರಿಹರದಲ್ಲಿ 261, ಹೊನ್ನಾಳಿಯಲ್ಲಿ 191, ಜಗಳೂರಿನಲ್ಲಿ 184 ಹಾಗೂ ನ್ಯಾಮತಿಯಲ್ಲಿ 94 ಜನರು ಯುವನಿಧಿಗೆ ನೋಂದಾಯಿಸಿದ್ದಾರೆ.
ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳಲ್ಲಿ ಫಲಾನುಭವಿಗಳ ಲೆಕ್ಕದ ಬಗ್ಗೆ ಸ್ಪಷ್ಟತೆ ಇತ್ತು. ಆದರೆ, ಪದವಿ ಹಾಗೂ ಡಿಪ್ಲೋಮಾ ಪೂರೈಸಿದವರಲ್ಲಿ ಎಷ್ಟು ಜನ ಓದು ಮುಂದುವರೆಸಿದ್ದಾರೆ ಹಾಗೂ ಎಷ್ಟು ಜನ ಕೆಲಸಕ್ಕೆ ಸೇರಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಅಲ್ಲದೇ, ಯೋಜನೆಗೆ ಸೇರ್ಪಡೆಯಾಗಲೂ ಅಂತಿಮ ದಿನಾಂಕವೂ ಇಲ್ಲ. ಹೀಗಾಗಿ ಯೋಜನೆ ಉದ್ಘಾಟನೆಯಾದ ನಂತರದ ದಿನಗಳಲ್ಲೂ ನೋಂದಣಿಗೆ ಅವಕಾಶವಿದೆ. ಹೀಗಾಗಿ ಯುವನಿಧಿ ಯೋಜನೆಯಲ್ಲಿ ಎಷ್ಟು ಫಲಾನುಭವಿಗಳು ಎಂಬುದು ಸ್ಪಷ್ಟವಾಗಿಲ್ಲ.
ಉಳಿದ ಗ್ಯಾರಂಟಿ ಯೋಜನೆಗಳಿಗೆ ಹೋಲಿಸಿದರೆ, ಯುವನಿಧಿ ನೀರಸ ಪ್ರತಿಕ್ರಿಯೆ ಪಡೆದಿರುವುದಂತೂ ಸ್ಪಷ್ಟವಾಗಿದೆ. 2023ರಲ್ಲಿ ಪದವಿ ಪಡೆದವರು ಮಾತ್ರ ಈ ಯೋಜನೆಗೆ ಅರ್ಹರಾಗಿದ್ದಾರೆ. ಅಲ್ಲದೇ, ಅವರು ಉನ್ನತ ವ್ಯಾಸಂಗದಲ್ಲಿ ಮುಂದುವರೆದಿರಬಾರದು, ಆರು ತಿಂಗಳ ಕಾಲ ನಿರುದ್ಯೋಗಿಯಾಗಿರಬೇಕು ಎಂದು ನಿರ್ಬಂಧಿಸಲಾಗಿದೆ. ಇದರಿಂದಾಗಿ ಯೋಜನೆಗೆ ಸೇರುವವರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ.