ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿನ ಇಂದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಎಸ್. ಪಾಟೀಲ್ ಅವರಿಂದ ವಿಶೇಷ ಉಪನ್ಯಾಸ
ದಾವಣಗೆರೆ ಬಾಪೂಜಿ ವಿದ್ಯಾಸಂಸ್ಥೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ವತಿಯಿಂದ ದಿ. ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥವಾಗಿ 15ನೇ ವಿಜ್ಞಾನ ವಿಚಾರ ಸಂಕಿರಣ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವು ಇಂದು ನೆರವೇರುತ್ತಿದ್ದು, ಇದರ ಪ್ರಧಾನ ಉಪನ್ಯಾಸಕರಾಗಿ ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾಗಿರುವ ಶಿವಕುಮಾರ್ ಎಸ್.ಪಾಟೀಲ್ ಅವರು `ಸೂರ್ಯ ಮತ್ತು ಚಂದ್ರನೆಡೆಗೆ ಭಾರತೀಯರ ಪಯಣ’ ವಿಷಯವಾಗಿ ಮಾತನಾಡಲಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದವರಾದ ಶಿವಕುಮಾರ್ ಅವರು, ಕುವೆಂಪು ವಿಶ್ವವಿದ್ಯಾನಿಲಯದ
ರಾಂಕ್ ವಿದ್ಯಾರ್ಥಿಯಾಗಿ ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಪದವಿಯನ್ನು ಪೂರೈಸಿದ್ದಾರೆ.
ಜಾರ್ಖಂಡ್‌ನ ರಾಂಚಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತ ಕೋತ್ತರ ಪದವಿಯಲ್ಲಿ ಮೊದಲ ರಾಂಕ್‌ಗಳಿ ಸಿರುವ ಇವರು, 1998 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಗೆ ವೈಜ್ಞಾನಿಕ ಇಂಜಿನಿಯರ್ ಆಗಿ ಸೇರಿದವರು. ಆರಂಭದಲ್ಲಿ ಇಸ್ರೋ ಉಪಗ್ರಹಗಳ ಪವರ್ ಸಬ್ ಸಿಸ್ಟಮ್‌ಗಳ ವಿಶ್ವಾಸಾರ್ಹತೆ, ಪರೀಕ್ಷೆ ಮತ್ತು ಮೌಲ್ಯಮಾಪನಗಳ ಇಂಜಿನಿಯರಾಗಿ ಉತ್ತಮ ಕೆಲಸ ನಿರ್ವಹಿಸಿ, ಸುಮಾರು 30ಕ್ಕೂ ಹೆಚ್ಚು ಉಪಗ್ರಹಗಳಾದ ಇನ್ಸಾಟ್-2ಇ, ಇನ್ಸಾಟ್-3ಎ, 3ಇ, ಟಿಇಎಸ್, ಐ ಆರ್ ಎಸ್-ಪಿ ಎಸ್/ಪಿ ಜಿ, ಕಾರ್ಟೋಸ್ಯಾಟ್-2ಎ ನಿಂದ 2ಇ ವರೆಗೆ ವಿದ್ಯುತ್ ಉಪ ವ್ಯವಸ್ಥೆಯ ಅನುಷ್ಠಾನಕ್ಕೆ ಕೊಡುಗೆ ನೀಡಿದ್ದಾರೆ.
ಪ್ರಸ್ತುತ ಇವರು ಸಿಸ್ಟಮ್ ಇಂಜಿನಿಯರಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಗ್ರೂಪಿನ ಪವರ್ ಸಿಸ್ಟಮ್ ರಿಯಲೈಸೇಶನ್ ಮತ್ತು ಟೆಸ್ಟ್ ಹಾಗೂ ಮೌಲ್ಯಮಾಪನ ವಿಭಾಗದ ಮುಖ್ಯಸ್ಥರಾಗಿದ್ದು, ರಿಮೋಟ್ ಸೆನ್ಸಿಂಗ್, ಸಂವಹನ, ವೈಜ್ಞಾನಿಕ ಮತ್ತು ಗಗನ್ಯಾನ್ ಸರಣಿಯ ಬಾಹ್ಯಾಕಾಶ ನೌಕೆಗಳಿಗೆ ಪವರ್ ಎಲೆಕ್ಟ್ರಾನಿಕ್ಸ್ ಉಪವ್ಯವಸ್ಥೆಯ ಸಾಕ್ಷಾತ್ಕಾರಕ್ಕೆ ಜವಾಬ್ದಾರರಾಗಿದ್ದಾರೆ.
ಈ ಎಲ್ಲಾ ಉಪಗ್ರಹಗಳ ಯಂತ್ರಾಂಶವನ್ನು ಬಾಹ್ಯ ಕೈಗಾರಿಕೆಗಳ ಬೆಂಬಲ ಬಳಸಿಕೊಂಡು ನಿರ್ಮಿಸಲಾಗುತ್ತಿದ್ದು, ಇವರು 2018ರಲ್ಲಿ ಫ್ರೆಂಚ್ ಗಯಾನದ ಕುರು ನಿಂದ ಉಡಾವಣೆಯಾದ ಜಿಸ್ಯಾಟ್-17 ಸಂವಹನ ಉಪಗ್ರಹದ ಉಡಾವಣಾ ಅಭಿಯಾನದಲ್ಲೂ ಭಾಗವಹಿಸಿದವರಾಗಿದ್ದಾರೆ. ಇವರು ಆಂಧ್ರಪ್ರದೇಶದ ಭಾರತೀಯ ಬಾಹ್ಯಾಕಾಶ ಬಂದರು ಶ್ರೀಹರಿಕೋಟದಲ್ಲಿ ನಡೆಸಿದ ಅನೇಕ ಉಡಾವಣೆ ಅಭಿಯಾನಗಳಲ್ಲಿ ಭಾಗವಹಿಸಿದ್ದು, ಐತಿಹಾಸಿಕ ವೈಜ್ಞಾನಿಕ ಕಾರ್ಯಾಚರಣೆಗಳಾದ ಚಂದ್ರಯಾನ-1, 2 ಹಾಗೂ 3, ಮಾರ್ಸ್ ಆರ್ಬಿಟರ್ ಮಿಷನ್ ಮತ್ತು ಆದಿತ್ಯ ಎಲ್ಒನ್ ಉಪಗ್ರಹಗಳಿಗೆ ವಿದ್ಯುತ್ ಉಪ ವ್ಯವಸ್ಥೆಯನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಕಾರ್ಯಾಚರಣೆಗಳಲ್ಲಿನ ಎಲ್ಲಾ ಉಪ ವ್ಯವಸ್ಥೆಗಳ ಕಾರ್ಯಕ್ಷಮತೆಯು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದ್ದು, ತುಂಬಾ ತೃಪ್ತಿಯನ್ನು ಅಷ್ಟೇ ಅಲ್ಲ ಭಾರತ ಮತ್ತು ಭಾರತೀಯರಿಗೆ ವಿಶ್ವದಲ್ಲಿ ಯಶಸ್ಸಿನ ಕೀರ್ತಿಯನ್ನು ತಂದುಕೊಟ್ಟಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದ್ದು, ಇಸ್ರೋದ ವಿಜ್ಞಾನಿಗಳ ಈ ಅಮೋಘ ಕಾರ್ಯಾಚರಣೆಯಲ್ಲಿ ದಾವಣಗೆರೆಯ ವಿದ್ಯಾರ್ಥಿ ಶಿವಕುಮಾರ್ ಎಸ್.ಪಾಟೀಲ್ ಅವರ ಪಾತ್ರವೂ ಮಹತ್ವದ್ದಾಗಿದೆ ಎಂಬುದು ದಾವಣಗೆರೆಗೂ ಹೆಮ್ಮೆಯ ವಿಷಯವಾಗಿದೆ.
ದಾಖಲೆ ಸಮಯದಲ್ಲಿ ಜಿ ಸ್ಯಾಟ್ 12 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಇವರು ಟೀಮ್ ಎಕ್ಸ್‌ಲೆನ್ಸ್ ಪ್ರಶಸ್ತಿಯನ್ನು ಸಹ ಪಡೆದಿದ್ದು, ಮಾಸ್ಟರ್ ಆಫ್ ಇಂಜಿನಿಯರಿಂಗ್‌ನಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಕ್ಕಾಗಿ 2007ರಲ್ಲಿ ಕೊಲ್ಕತ್ತಾದ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಇಂಡಿಯಾದಿಂದ `ಗ್ಲ್ಯಾಸ್ಲೋ ಔಲ್ಡ್’ ವಿದ್ಯಾರ್ಥಿ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ.
ರಾಷ್ಟ್ರೀಯ, ಅಂತರರಾಷ್ಟ್ರೀಯ ನಿಯತ ಕಾಲಿಕೆಗಳು ಮತ್ತು ಸಮ್ಮೇಳನಗಳಲ್ಲಿ ಸುಮಾರು 10 ತಾಂತ್ರಿಕ ಪ್ರೌಢ ಪ್ರಬಂಧಗಳನ್ನು ಮಂಡಿಸಿ ದ್ದಾರೆ. ಶಿವಕುಮಾರ್ ಎಸ್. ಪಾಟೀಲ್ ಅವರು, ಇಂದು ನಡೆಯಲಿರುವ ಈ ವಿಜ್ಞಾನ ವಿಚಾರ ಸಂಕಿರಣದಲ್ಲಿ ಗುತ್ತೂರು ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಧರಮಯ್ಯ ಅವರು `ಪರೀಕ್ಷೆ ಒಂದು ಹಬ್ಬ, ಸಂಭ್ರಮಿ ಸೋಣ’ ಎಂಬ ವಿಷಯವಾಗಿಯೂ ಮಾತನಾಡ ಲಿದ್ದು, ನಿವೃತ್ತ ಮುಖ್ಯೋಪಾಧ್ಯಾಯರಾದ ಟಿ.ಎಂ.ಶರಣಪ್ಪನವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಸಹ ನಡೆಸಿಕೊಡಲಿದ್ದಾರೆ.
ಕಾಲೇಜು ಆವರಣದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಈ ವಿಜ್ಞಾನ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ.ರುದ್ರಪ್ಪನವರ ಅಧ್ಯಕ್ಷತೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮತ್ತು ಶೈಕ್ಷಣಿಕ ನಿರ್ದೇಶಕರಾದ ಡಾ.ಎಂ.ಜಿ.ಈಶ್ವರಪ್ಪ ಅವರು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಾಪೂಜಿ ವಿದ್ಯಾಸಂಸ್ಥೆಯ ಖಜಾಂಚಿ ಎ.ಎಸ್.ನಿರಂಜನ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಎಲೈಟ್ ಒಲಂಪಿಯಾಡ್ ಪ್ರೋಗ್ರಾಮ್ ಗೋಣಿವಾಡದ ನಿರ್ದೇಶಕ ಜೆ.ಪದ್ಮನಾಭ ಭಾಗವಹಿಸಲಿದ್ದಾರೆ.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ