ದಾವಣಗೆರೆ, ಡಿ. 4- ದೇವದಾಸಿಯರ ಮತ್ತು ಮಾಜಿ ದೇವದಾಸಿಯರ ಪುನರ್ ಸಮೀಕ್ಷೆ ಕಾರ್ಯಕ್ಕೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಮತ್ತವರ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕಲ್ಪಿಸಬೇಕೆಂಬ ನಿರ್ಣಯಗಳನ್ನು ಹರಿಹರದಲ್ಲಿ ನಡೆದ ಮಹಿಳಾ ಒಕ್ಕೂಟದ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ತೆಗೆದುಕೊಳ್ಳಲಾಯಿತು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ರಾದ ಎ. ಜ್ಯೋತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹರಿಹರದಲ್ಲಿ ಡಿ.2 ಮತ್ತು 3 ರಂದು ಎರಡು ದಿನಗಳ ಕಾಲ ಸಮ್ಮೇಳನವನ್ನು ಆಯೋಜಿಸ ಲಾಗಿತ್ತು. ಇದೇ ವೇಳೆ ನೂತನ ಪದಾಧಿಕಾರಿಗಳ ಸಹ ಆಯ್ಕೆ ಮಾಡಲಾಯಿತು ಎಂದರು.
ಅಧ್ಯಕ್ಷರಾಗಿ ಎ. ಜ್ಯೋತಿ, ಕಾರ್ಯದರ್ಶಿ ಯಾಗಿ ಕೆ. ರೇಣುಕಾ, ಖಜಾಂಚಿಯಾಗಿ ದಿವ್ಯಾ ಎಸ್. ಬಿರಾದಾರ್, ಉಪಾಧ್ಯಕ್ಷೆಯಾಗಿ ಪದ್ಮಾ ಪಾಟೀಲ್, ಸಹ ಕಾರ್ಯದರ್ಶಿಯಾಗಿ ವೈ.ಮಹಾದೇವಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ ಮಹಿಳೆಯರ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಮುಂದಿನ ಹೋರಾಟಗಳ ರೂಪು-ರೇಷೆಗಳ ಕುರಿತು ಚಿಂತನೆ ನಡೆಸಲಾಯಿತು ಎಂದು ಹೇಳಿದರು.
ಹೆಣ್ಣು ಭ್ರೂಣ ಹತ್ಯೆ, ಮಕ್ಕಳ ಮಾರಾಟ ದಂಧೆ, ಕ್ಷೀಣಿಸುತ್ತಿರುವ ಲಿಂಗಾನುಪಾತ, ಉದ್ಯೋಗಸ್ಥ ಮಹಿಳೆಯರ ಸಮಸ್ಯೆಗಳು, ನಿರ್ಲಕ್ಷಿತ ಮಹಿಳೆಯರ ಆರೋಗ್ಯ ಸಮಸ್ಯೆ, ಉದ್ಯೋಗ ಖಾತ್ರಿಯಲ್ಲಿನ ಲೋಪದೋಷಗಳು, ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಬಗ್ಗೆ ಲಿಂಗ ತಾರತಮ್ಯವನ್ನು ಹೋಗಲಾಡಿಸುವ ಕುರಿತು, ಕೋಮುವಾದವನ್ನು ನಿಯಂತ್ರಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್. ದಿವ್ಯಾ, ಎಂ.ಬಿ. ಶಾರದಮ್ಮ, ರೇಣುಕಾ, ಎಸ್.ಎಸ್. ಮಲ್ಲಮ್ಮ ಉಪಸ್ಥಿತರಿದ್ದರು.