ರೇಣುಕಾಚಾರ್ಯ ಅವಶ್ಯಕತೆ ನನಗಾಗಲೀ, ಪಕ್ಷಕ್ಕಾಗಲೀ ಇಲ್ಲ

ರೇಣುಕಾಚಾರ್ಯ ಅವಶ್ಯಕತೆ ನನಗಾಗಲೀ, ಪಕ್ಷಕ್ಕಾಗಲೀ ಇಲ್ಲ

ಹೊನ್ನಾಳಿ, ಅ.18- ಎಂ.ಪಿ.ರೇಣುಕಾಚಾರ್ಯ ಅವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲವೆಂದು ಶಾಸಕ ಡಿ.ಜಿ.ಶಾಂತನಗೌಡ ಸ್ಪಷ್ಟಪಡಿಸಿದರು.

ಗೊಲ್ಲರಹಳ್ಳಿಯ ಅವರ ನಿವಾಸದಲ್ಲಿ ಪತ್ರಿಗೋಷ್ಠಿಯನ್ನುದ್ದೇ ಶಿಸಿ ಅವರು ಮಾತನಾಡಿದರು.

ಮಾಜಿ ಶಾಸಕರ ಕಾಂಗ್ರೆಸ್ ಸೇರ್ಪಡೆಯ ವಿಚಾರಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದರ ಬಗ್ಗೆ ಅವರು ನನ್ನೊಂದಿಗೆ ಚರ್ಚೆ ಮಾಡಿಲ್ಲ, ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.

ನಮ್ಮ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಅವರ ಅವಶ್ಯಕತೆ ಇಲ್ಲ ಎಂದು ಹೇಳುತ್ತಿದ್ದಾರೆ, ನಮ್ಮ ಕಾರ್ಯಕರ್ತರ ಅಭಿಪ್ರಾಯವೇ ನನ್ನ ಅಭಿಪ್ರಾಯವೂ ಆಗಿದೆ ಎಂದು ಹೇಳಿದರು. 

ನಾನು ಮಾಜಿ ಶಾಸಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ, ನಾವಿಬ್ಬರೂ ಅನ್ಯೋನ್ಯವಾಗಿದ್ದೇವೆ, ನಮ್ಮಿಬ್ಬರ ಸಂಬಂಧ ಚೆನ್ನಾಗಿದೆ ಎನ್ನುವ ಮಾತುಗಳು ನಮ್ಮ ಕಾರ್ಯಕರ್ತರಿಂದ ಹಿಡಿದು ಕ್ಷೇತ್ರದ ಜನರ ಬಾಯಲ್ಲಿಯೂ ಕೇಳಿ ಬರುತ್ತಿದೆ. ಇದು ಸುಳ್ಳು, ನಾನು ಮಾಜಿ ಶಾಸಕರೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಅದರ ಅವಶ್ಯಕತೆಯೂ ನನಗಾಗಲೀ ಪಕ್ಷಕ್ಕಾಗಲೀ ಇಲ್ಲವೆಂದು ಪುನರುಚ್ಚರಿಸಿದರು. 

ಚುನಾವಣಾ ಪೂರ್ವದಲ್ಲಿ ಅವರು ನಮ್ಮ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿದ್ದಾರೆ, ಅದಕ್ಕೆ ನಾವೂ ಪ್ರತ್ಯಾರೋಪ ಮಾಡಿದ್ದೇವೆ, ಇದೆಲ್ಲ ಕ್ಷೇತ್ರದ ಜನತೆಗೆ ಗೊತ್ತಿದೆ. ಹೀಗಾಗಿ ಅವರೊಂದಿಗೆ ನಮ್ಮ ಹೊಂದಾಣಿಕೆಯಾಗುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು. 

ಚುನಾವಣಾ ಪೂರ್ವದಲ್ಲಿ ನೀವು ಅಧಿಕಾರಕ್ಕೆ ಬಂದಾಗ ಎಂ.ಪಿ.ರೇಣುಕಾಚಾರ್ಯ ಅವರ ಹಗರಣಗಳನ್ನು ತನಿಖೆ ಮಾಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದಿರಿ, ಅಧಿಕಾರಕ್ಕೆ ಬಂದು ಅದಾಗಲೇ ಐದು ತಿಂಗಳು ಕಳೆದಿವೆ, ಮತ್ತೇ ಏಕೆ ಸುಮ್ಮನಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ನಾನು ಶಾಸಕನಾದ ತಕ್ಷಣವೇ ನಮ್ಮ ಸರ್ಕಾರಕ್ಕೆ ಅವರ ಹಗರಣಗಳ ಕುರಿತು ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ. ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆಬಾವಿ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ನಮ್ಮ ಸರ್ಕಾರ ಅದರ ಬಗ್ಗೆ ತನಿಖೆ ಕೈಗೊಂಡಿದ್ದು, ಅದು ಜಿ.ಪಂ. ಕಚೇರಿಗೆ ವಿಚಾರಣೆಗಾಗಿ ಬಂದಿದೆ ಎಂದು ಹೇಳಿದರು.

error: Content is protected !!