ಮಲೇಬೆನ್ನೂರು ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ 2ನೇ ವರ್ಷದ ಹಿಂದೂ ಮಹಾಗಣಪತಿಯ ವಿಸರ್ಜನೆ ಇಂದು ನಡೆಯಲಿದೆ.
ಪಟ್ಟಣದಲ್ಲಿ ಇಂದು ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಬೃಹತ್ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 7.30 ಕ್ಕೆ ಹೂವಿನಿಂದ ಅಲಂ ಕಾರಗೊಂಡಿರುವ ಟ್ರ್ಯಾಕ್ಟರ್‌ನಲ್ಲಿ ಮಹಾ ಗಣಪತಿಯನ್ನು ಇಡಲಾಗುವುದು. ನಂತರ 10 ಗಂಟೆಗೆ ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್ ಸೇರಿದಂತೆ, ಗಣ್ಯರು ಚಾಲನೆ ನೀಡಲಿದ್ದಾರೆ.
ಶ್ರೀರಾಮ, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಡಿಜೆ ಹೊಂದಿರುವ ನಾಲ್ಕು ಟ್ರ್ಯಾಕ್ಟರ್‌ಗಳು ಮೆರವಣಿಗೆಯಲ್ಲಿ ಇರುತ್ತವೆ. ಈ ಬಾರಿ ಮಹಿಳೆಯರಿಗಾಗಿ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಕಲಾ-ಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ನೀರಾವರಿ ಇಲಾಖೆ ಆವರಣದಲ್ಲಿ ರೈತ ಭವನದ ಬಳಿ ಬೆಳಿಗ್ಗೆ 9 ರಿಂದ ರಾತ್ರಿ 10 ರವರೆಗೆ ನಿರಂತರ ಅನ್ನ ಸಂತರ್ಪಣೆಯನ್ನು ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಮಾಡಲಾಗಿದೆ.
ಈ ವರ್ಷವೂ ವರ್ತಕ ಚಿಟ್ಟಕ್ಕಿ ರಮೇಶ್ ಮತ್ತು ಸ್ನೇಹಿತರು 15 ಸಾವಿರ ಲಾಡು ಉಂಡಿ ವಿತರಣೆ ಮತ್ತು ಬಂಗಾರದ ಅಂಗಡಿ ರಾಜು ವೆರ್ಣೇಕರ್ ಅವರು ತಮ್ಮ ಪತ್ನಿ ಸುಮಾ ಅವರ ಸ್ಮರಣಾರ್ಥ ಅನ್ನ ಸಂತರ್ಪಣೆಯನ್ನು ಪೊಲೀಸ್ ಠಾಣೆ ಕ್ರಾಸ್ ಬಳಿ ಪ್ರತ್ಯೇಕವಾಗಿ ಹಮ್ಮಿ ಕೊಂಡಿದ್ದಾರೆ.
ಮುಖ್ಯ ವೃತ್ತದಲ್ಲಿ ಗೆಳೆಯರ ಬಳಗದ ವತಿಯಿಂದ ಮಧ್ಯಾಹ್ನ ಉಪಹಾರದ ವ್ಯವಸ್ಥೆ ಮಾಡಿದ್ದಾರೆ.
ರಸ್ತೆ ಮಾರ್ಗ ಬದಲಾವಣೆ : ಶೋಭಾ ಯಾತ್ರೆ ಅಂಗವಾಗಿ ಪಟ್ಟಣದ ಹೆದ್ದಾರಿ ಮಾರ್ಗವನ್ನು ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಬದಲಾಯಿಸಿದ್ದು, ಹೊನ್ನಾಳಿ ಕಡೆಯಿಂದ ಹರಿಹರ ಮಾರ್ಗವಾಗಿ ಹೋಗುವ ವಾಹನಗಳು ಕೊಮಾರನಹಳ್ಳಿ ಚಾನಲ್ ರಸ್ತೆ ಮೂಲಕ ಜಿ. ಬೇವಿನಹಳ್ಳಿ, ಜಿಗಳಿ-ಕುಂಬಳೂರು ಮಾರ್ಗ ವಾಗಿ ತೆರಳಬೇಕು. ಹರಿಹರ ಕಡೆಯಿಂದ ಹೊನ್ನಾಳಿ ಮಾರ್ಗ ವಾಗಿ ಹೋಗುವ ವಾಹನಗಳು ಕುಂಬಳೂರಿನಿಂದ ನಿಟ್ಟೂರು – ಹರಳಹಳ್ಳಿ – ಹಾಲಿವಾಣ – ಕೊಮಾರನಹಳ್ಳಿ ಮೂಲಕ ಹೋಗಬಹುದೆಂದು ಪಿಎಸ್‌ಐ ಪ್ರಭು ಕೆಳಗಿನಮನಿ ತಿಳಿಸಿದ್ದಾರೆ.
ಬಿಗಿ ಭದ್ರತೆ : ಶೋಭಾಯಾತ್ರೆ ಅಂಗವಾಗಿ ಪಟ್ಟಣದಲ್ಲಿ ಎಸ್ಪಿ ಉಮಾ ಪ್ರಶಾಂತ್ ಮತ್ತು ಎಎಸ್ಪಿ, ಗ್ರಾಮಾಂತರ ಡಿವೈಎಸ್ಪಿ, ಹರಿಹರ ಸಿಪಿಐ ಅವರ ಮಾರ್ಗದರ್ಶನದಲ್ಲಿ ಬಿಗಿ ಭದ್ರತೆಯ ವ್ಯವಸ್ಥೆ ಮಾಡಿದ್ದು, 300 ಕ್ಕೂ ಹೆಚ್ಚು ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.