ದೇವರಬೆಳಕೆರೆ ಪಿಕಪ್ ಡ್ಯಾಂ ಹಿನ್ನೀರಲ್ಲಿ ಸ್ನಾನಕ್ಕೆ ಹೋಗಿದ್ದ ತಂದೆ-ಮಗ ಸಾವು

ದೇವರಬೆಳಕೆರೆ ಪಿಕಪ್ ಡ್ಯಾಂ ಹಿನ್ನೀರಲ್ಲಿ ಸ್ನಾನಕ್ಕೆ ಹೋಗಿದ್ದ ತಂದೆ-ಮಗ ಸಾವು

ಮಲೇಬೆನ್ನೂರು, ಸೆ.28- ನೀರಿನ ಸುಳಿಯಲ್ಲಿ ಸಿಲುಕಿಕೊಂಡಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಂದೆ ಮತ್ತು ಓರ್ವ ಪುತ್ರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಳ ಘಟನೆ ಗುರುವಾರ ಮಧ್ಯಾಹ್ನ ದೇವರಬೆಳಕೆರೆ ಪಿಕಪ್‌ ಡ್ಯಾಂ ಬಳಿ ನಡೆದಿದೆ.

ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದ ಹಾವಜ್ಜರ ದಿ. ನಾಗಪ್ಪನವರ ಪುತ್ರ ಹೆಚ್‌.ಎನ್‌. ಚಂದ್ರಪ್ಪ (46) ಮತ್ತು ಚಂದ್ರಪ್ಪನವರ ಪುತ್ರ ಶೌರ್ಯ (10) ಇವರು ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮೃತ ಚಂದ್ರಪ್ಪ ಕಳೆದ 8-10 ವರ್ಷಗಳಿಂದ ಪತ್ನಿ, ಮಕ್ಕಳೊಂದಿಗೆ ದಾವಣಗೆರೆಯಲ್ಲಿ ವಾಸವಾಗಿದ್ದರು.

ಗುರುವಾರ ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದುದರಿಂದ ಮಕ್ಕಳನ್ನು ಕರೆದುಕೊಂಡು ಚಂದ್ರಪ್ಪ ಅವರು ಪತ್ನಿ ಕೀರ್ತಿ ಅವರೊಂದಿಗೆ ಊಟ ಕಟ್ಟಿಕೊಂಡು ದೇವರಬೆಳಕೆರೆ ಬಳಿ ಬಂದಿದ್ದಾರೆ.

ದೇವರಬೆಳಕೆರೆ ಪಿಕಪ್‌ ಡ್ಯಾಂ ಕೆಳಗಡೆ ಇರುವ ಸಣ್ಣ ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಊಟ ಮಾಡಲು ಕೆಳಗಡೆ ಇಳಿದಿದ್ದಾರೆ. ಕಲ್ಲು ಬಂಡೆಯ ಮೇಲೆ ಚಂದ್ರಪ್ಪ ಮತ್ತು ಕೀರ್ತಿ ಅವರು ಊಟ ಮಾಡಲು ಬುತ್ತಿಯ ಬಾಕ್ಸ್‌ ಓಪನ್‌ ಮಾಡುವ ವೇಳೆಯಲ್ಲಿ ಪುತ್ರರಾದ ಆತ್ರಾಯ ಮತ್ತು ಶೌರ್ಯ ಕೈ ತೊಳೆಯಲು ನೀರು ಹರಿಯುವ ಸ್ಥಳಕ್ಕೆ ಹೋಗಿದ್ದಾರೆ.

ಅದೇ ವೇಳೆ ನೀರಿನ ಹರಿವು ಹೆಚ್ಚಾಗಿ ಇಬ್ಬರು ಪುತ್ರರು ನೀರಿನಲ್ಲಿ ಸಿಲುಕಿಕೊಂಡು ಅಪ್ಪ-ಅಮ್ಮ ಎಂದು ಕೂಗಾಡಿದ್ದಾರೆ. ಕೂಡಲೇ ಚಂದ್ರಪ್ಪ ಅವರು ಓಡಿ ಹೋಗಿ ಮಕ್ಕಳನ್ನು ರಕ್ಷಿಸಲು ನೀರಿಗೆ ಇಳಿದಿದ್ದಾರೆ.

ಆಗ ನೀರಿನ ಹರಿವು ಮತ್ತಷ್ಟು ಹೆಚ್ಚಾದ ಕಾರಣ ಚಂದ್ರಪ್ಪ ಕೂಡಾ ನೀರಿನ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಇದನ್ನು ನೋಡಿದ ಅಲ್ಲಿಯೇ ಸಮೀಪದಲ್ಲಿದ್ದ ಮೀನುಗಾರರು ಬಂದು ಆತ್ರಾಯ ಎಂಬಾತನನ್ನು ನೀರಿನಿಂದ ಕಾಪಾಡಿದ್ದಾರೆ.

ಆದರೆ ಚಂದ್ರಪ್ಪ ಮತ್ತು ಶೌರ್ಯ ಇಬ್ಬರೂ ನೀರಿನಲ್ಲಿ ಮುಳುಗಿಹೋಗಿದ್ದಾರೆ. ಅಲ್ಲಿದ್ದವರು ಹುಡುಕಾಟ ನಡೆಸಿದಾಗ ಚಂದ್ರಪ್ಪ ಶವವಾಗಿ ಪತ್ತೆಯಾಗಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಶೌರ್ಯ ಅಗ್ನಿಶಾಮಕ ದಳದವರು ನಡೆಸಿದ ಕಾರ್ಯಾಚರಣೆಯಲ್ಲಿ ಶವವಾಗಿ ಸಿಕ್ಕಿದ್ದಾನೆ. 

ಈ ವೇಳೆಗೆ ಸ್ಥಳದಲ್ಲಿ ಜನಜಾತ್ರೆಯಂತೆ ಸೇರಿದ್ದರು. ಪತ್ನಿ ಕೀರ್ತಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಚಂದ್ರಪ್ಪ ಮತ್ತು ಶೌರ್ಯನ ಮೃತ ದೇಹಗಳನ್ನು ದಾವಣಗೆರೆಯ ಸಿಜಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು. 

ನೀರಿನಲ್ಲಿ ಸಿಲುಕಿಕೊಂಡು ನೀರು ಕುಡಿದು ಸುಸ್ತಾಗಿದ್ದ ಚಂದ್ರಪ್ಪನವರ ಹಿರಿಯ ಪುತ್ರ ಆತ್ರಾಯ (13) ಎಂಬಾತನನ್ನು ಚಿಕಿತ್ಸೆಗಾಗಿ ಬಾಪೂಜಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶವ ಪರೀಕ್ಷೆಯ ನಂತರ ಚಂದ್ರಪ್ಪ ಮತ್ತು ಶೌರ್ಯನ ಅಂತ್ಯಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಿಟ್ಲಕಟ್ಟೆಯಲ್ಲಿ ನೆರವೇರಿಸಲಾಗುವುದೆಂದು ಮೃತ ಚಂದ್ರಪ್ಪನವರ ಸಹೋದರ ನಾಗರಾಜ್‌ ತಿಳಿಸಿದ್ದಾರೆ.

ವಿಷಯ ತಿಳಿದ ಹರಿಹರ ಸಿಪಿಐ ಸುರೇಶ್‌ ಮತ್ತು ಹರಿಹರ ಗ್ರಾಮಾಂತರ ಪಿಎಸ್‌ಐ ಅರವಿಂದ್‌ ಅವರು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದವರನ್ನು ಕರೆಸಿ ಶವ ಪತ್ತೆ ಮಾಡಲು ಶ್ರಮಿಸಿದರು.

error: Content is protected !!