ಸಾಣೇಹಳ್ಳಿ, ಸೆ.21- ಇಲ್ಲಿನ ಶ್ರೀಮಠ ದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಸಾನ್ನಿಧ್ಯದಲ್ಲಿ, ತರಳಬಾಳು ಜಗದ್ಗುರು ಲಿಂ.ಶ್ರೀ ಶಿವಕುಮಾರ ಸ್ವಾಮಿಗಳ ವರ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ `ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರ’ ಹಾಗೂ `ರಾಷ್ಟ್ರೀಯ ನಾಟಕೋ ತ್ಸವ’ದ ಪೂರ್ವಭಾವಿ ಸಭೆ ನಡೆಯಿತು.
ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಶ್ರದ್ಧಾಂಜಲಿ ನೆನಪಿನಲ್ಲಿ ಉಡುಪಿ ಆದರ್ಶ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಜಿ. ಎಸ್. ಚಂದ್ರಶೇಖರ್ ನೇತೃತ್ವದಲ್ಲಿ 60 ಜನ ವೈದ್ಯರ ತಂಡ ಇದೇ ದಿನಾಂಕ 24 ರ ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರಿಗೆ ಆರೋಗ್ಯ ತಪಾಸಣೆ ನಡೆಸುವರು. ಇದರಲ್ಲಿ ರಕ್ತದೊತ್ತಡ ಪರೀಕ್ಷೆ, ರಕ್ತದ ಸಕ್ಕರೆಯ ಅಂಶ, ರಕ್ತದ ಕೊಬ್ಬಿನಾಂಶ, ಇಸಿಜಿ, ಹೃದಯ ಸ್ಕ್ಯಾನಿಂಗ್, ಎಲುಬು ಮತ್ತು ಕೀಲು, ಕಿವಿ, ಮೂಗು, ಗಂಟಲು ರೋಗ, ಹೃದ್ರೋಗ, ಕರುಳು
ಮತ್ತು ಲಿವರ್, ಬಂಜೆತನ ನಿವಾರಣೆ ಮತ್ತು ಪ್ರಸೂತಿ, ಕಣ್ಣಿನ ಶಸ್ತ್ರ ಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ ಮುಂತಾದ ಕಾಯಿಲೆಗೆ ಸಂಬಂಧಪಟ್ಟ ವೈದ್ಯರು ತಪಾಸಣೆ ನಡೆಸುವರು. ಹೆಚ್ಚಿನ ಮಾಹಿತಿಗಾಗಿ 9980258400 ಹಾಗೂ 9663330864 ಸಂಪರ್ಕಿಸಬಹುದು.
ನಂತರ ಸಂಜೆ ಐದು ಗಂಟೆಗೆ ಶ್ರದ್ಧಾಂಜಲಿ ಸಮಾರಂಭ ನಡೆಯಲಿದೆ. ಬಿ.ಎಲ್. ಶಂಕರ್ ಶ್ರದ್ಧಾಂಜಲಿ ನುಡಿಗಳನ್ನಾಡುವರು. ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಮಕ್ಕಳು ಹಾಗೂ ಶ್ರೀ ಶಿವಕುಮಾರ ಸಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮೋಳಿಗೆ ಮಾರಯ್ಯ ನಾಟಕ, ವಚನ ನೃತ್ಯ ಪ್ರದರ್ಶನ ನಡೆಸಿಕೊಡುವರು.
ನವೆಂಬರ್ 2 ರಿಂದ 8 ರವರೆಗೆ ಏಳು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿವೆ. ಎಸ್. ಎಸ್. ಒಳಾಂಗಣ ರಂಗಮಂದಿರದಲ್ಲಿ ಮಧ್ಯಾಹ್ನದ ನಾಟಕ ಪ್ರದರ್ಶನಗಳು ಮತ್ತು ಮುಖ್ಯ ವಿಚಾರ ಸಂಕಿರಣದ ಕಾರ್ಯಕ್ರಮಗಳು ನಡೆಯಲಿವೆ. ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ. ನಾಟಕೋತ್ಸವದಲ್ಲಿ ಶಿವಸಂಚಾರದ 3 ನಾಟಕಗಳು ಮತ್ತು ಪರಭಾಷೆಯ ನಾಟಕಗಳೂ ಸೇರಿದಂತೆ ಒಟ್ಟು 12 ನಾಟಕಗಳು ಪ್ರದರ್ಶನಗೊಳ್ಳುವವು.
ಸಭೆಯಲ್ಲಿ ಎಸ್. ಕೆ. ಪರಮೇಶ್ವರಯ್ಯ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಕಾಟೇಹಳ್ಳಿ ಶಿವಕುಮಾರ್, ಬನ್ಸಿಹಳ್ಳಿ ಅಜ್ಜಪ್ಪ, ಆಲ್ದಳ್ಳಿ ಓಂಕಾರಪ್ಪ ಇತರರು ಇದ್ದರು.