ಅಧಿಕೃತ ನೋಟಿಸ್ ನೀಡದೆ ಉಚ್ಛಾಟಿಸಿರುವುದು ಸರಿಯಲ್ಲ

ಅಧಿಕೃತ ನೋಟಿಸ್ ನೀಡದೆ ಉಚ್ಛಾಟಿಸಿರುವುದು ಸರಿಯಲ್ಲ

ಬಿಜೆಪಿಯಿಂದ ಉಚ್ಛಾಟನೆಗೆ ಮಾಜಿ ಶಾಸಕ ಟಿ. ಗುರುಸಿದ್ಧನಗೌಡ ಆಕ್ಷೇಪ

ದಾವಣಗೆರೆ, ಸೆ. 6- ಪಕ್ಷದಿಂದ ಅಧಿಕೃತ ನೋಟಿಸ್ ನೀಡದೇ, ಮೌಖಿಕ, ಲಿಖಿತವಾಗಿ ಯಾವುದೇ ಸ್ಪಷ್ಟನೆ ಪಡೆಯದೇ ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರೂ ಸೇರಿ ವರಿಷ್ಠರಿಗೆ ಮಾಹಿತಿ ನೀಡದೇ  ಜಿಲ್ಲಾ ಮಟ್ಟದ ಕೆಲವರು ಈ ಸಂಚು ನಡೆಸಿದ್ದಾರೆ ಎಂದು ಮಾಜಿ ಶಾಸಕ ಟಿ. ಗುರುಸಿದ್ಧನಗೌಡ ತಿಳಿಸಿದ್ದಾರೆ.

ಹಾಲಿ ಮತ್ತು ಮಾಜಿ ಶಾಸಕರನ್ನು ಉಚ್ಛಾಟನೆ ಮಾಡಲು ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಯಾವುದೇ ಅಧಿಕಾರ ಇಲ್ಲ ಎಂಬುದನ್ನು ಬಿಜೆಪಿ ಸಂವಿಧಾನವೇ ತಿಳಿಸುತ್ತದೆ.  ಆದರೂ ನನ್ನನ್ನು ಉಚ್ಛಾಟನೆ ಮಾಡುವ ಷಡ್ಯಂತ್ರ್ಯಕ್ಕೆ ಮೂಲಕ ಕಾರಣವು ಬೇರೆ ಇದೆ ಎಂದು ತಿಳಿದುಬಂದಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನನ್ನ ಪುತ್ರ ಡಾ.ಟಿ.ಜಿ. ರವಿಕುಮಾರ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದು, ದಿನೇ ದಿನೇ ಅಪಾರ ಜನ ಬೆಂಬಲ ಗಳಿಸುತ್ತಿದ್ದಾರೆ. ಹೇಗಾದರೂ ಮಾಡಿ ಅವರನ್ನು ಈಗಲೇ ಸ್ಪರ್ಧೆಯಿಂದ ಹತ್ತಿಕ್ಕಲು ಜಿಲ್ಲೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ನಡೆಸಿ, ಕಾರ್ಯಕರ್ತರು, ಬೆಂಬಲಿಗರು, ಮತದಾರರಲ್ಲಿ ಗೊಂದಲ ಮೂಡಿಸಲು ಯತ್ನಿಸಿದ್ದಾರೆಂದು ಹೇಳಿದ್ದಾರೆ. 

ಜಿಲ್ಲೆಯಲ್ಲಿ ಬಿಜೆಪಿ ಇನ್ನೂ ನೆಲೆಯೂರದ ಸಂದರ್ಭದಲ್ಲಿ ಪಕ್ಷ ಸಂಘಟನೆಯನ್ನು ಮಾಡುತ್ತಾ ಬಂದಿದ್ದೇನೆ. ಜಗಳೂರು ಮೀಸಲು ಕ್ಷೇತ್ರವಾದ ಮೇಲೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಪಡೆಯದೇ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಪಕ್ಷದ ನಿಯಮಾನುಸಾರ  ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಹೊಣೆಗಳಿಂದ ಮುಕ್ತನಾಗಿ ಸಾಮಾನ್ಯ ಕಾರ್ಯಕರ್ತಾನಾಗಿ ದುಡಿಯುತ್ತಿದ್ದೇನೆ.

ಪಕ್ಷದ ಉಚ್ಛಾಟನೆ ಜಿಲ್ಲಾ ಬಿಜೆಪಿಯ ಕೆಲವರ ಸಂಚು ಎಂಬುದನ್ನು ರಾಷ್ಟ್ರ, ರಾಜ್ಯ ಮಟ್ಟದ ವರಿಷ್ಠರಿಗೆ ವರದಿ ನೀಡಿ, ದಾವಣಗೆರೆಯಲ್ಲಿ ಬಿಜೆಪಿ ಉಳಿಸುವ ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಕಳೆದ ಎರಡು ದಶಕಗಳಿಂದ ಸಕ್ರಿಯನಾಗಿದ್ದು, ಬಿಜೆಪಿ ರಾಕ್ಯ ವೈದ್ಯಕೀಯ ಪ್ರಕೋಷ್ಠದ ಸದಸ್ಯನಾಗಿ  ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ. ಬೆಂಬಲಿಗರ ಒತ್ತಡಕ್ಕೆ ಮಣಿದು ಲೋಕಸಭಾ ಚುನಾವಣೆಯ ಆಕಾಂಕ್ಷಿ ಯಾಗಿದ್ದೇನೆ ಎಂದು ಡಾ. ರವಿಕುಮಾರ್ ತಿಳಿಸಿದ್ದಾರೆ.

error: Content is protected !!