ಜಗಳೂರು: ಅಭಿನಂದನೆ, ಕೃತಜ್ಞತಾ ಸಮಾರಂಭದಲ್ಲಿ ಶಾಸಕ ಬಿ.ದೇವೇಂದ್ರಪ್ಪ
ಜಗಳೂರು, ಜೂ.4- ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಸಾಕಾರಗೊಂಡಿರುವ ಎರಡು ಶಾಶ್ವತ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸುವೆ. ನಾನು ಮಾತನಾಡುವ ಶಾಸಕನಲ್ಲ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸೇವಕ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ತರಳಬಾಳು ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
2018ರಲ್ಲಿ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಸಿರಿಗೆರೆ ಶ್ರೀಗಳು 57 ಕೆರೆ ತುಂಬಿಸುವ ಯೋಜನೆ ರೂಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಯಶಸ್ವಿಯಾಗಿ ಕ್ಷೇತ್ರದಲ್ಲಿ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಬಹುದಿನದ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸಾಕಾರಗೊಂಡಿದ್ದು, ನನ್ನ ಆಡಳಿತಾವಧಿಯಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಆಡಳಿತದ ಚುಕ್ಕಾಣಿ ಹಿಡಿದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು ಕ್ಷೇತ್ರಕ್ಕೆ ವರದಾನವಾಗಿದ್ದು. ಬರದ ನಾಡು ನೀರಾವರಿ ನಾಡಾಗಿ ಪರಿವರ್ತನೆಗೊಂಡು ರೈತರ ಬದುಕು ಹಸನಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಸಾರಿಗೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ಬಡವರಿಗೆ ಸೂರು ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು. ಕ್ಷೇತ್ರದಲ್ಲಿ ನನ್ನನ್ನು ಶಾಸಕನನ್ನಾಗಿಸಲು ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಪಕ್ಷ ತೊರೆದವರಿಗೆ ಕಾರಣ ಕೇಳಿ ಬರಮಾಡಿಕೊಳ್ಳುವೆ: ಕಾಂಗ್ರೆಸ್ ಪಕ್ಷ ಬಿ ಫಾರಂ ನೀಡುತ್ತಿದ್ದಂತೆ ಪಕ್ಷ ತೊರೆದು ಹೊರ ಹೋದವರು, ಇದೀಗ ಪಕ್ಷದಿಂದ ಗೆದ್ದ ನಂತರ ಪುನಃ ಪಕ್ಷ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿರುವವರಿಗೆ ನನ್ನ ಪ್ರಶ್ನೆ ಅಧಿಕಾರ, ಸ್ಥಾನಮಾನ ಅನುಭವಿಸಿದ್ದ ನೀವು ಏಕೆ, ಎಲ್ಲಿಗೆ ಯಾವ ಉದ್ದೇಶಕ್ಕೆ ಹೋಗಿದ್ದಿರಿ? ಎಂದು ಸ್ಪಷ್ಟನೆ ನೀಡಿ ಬನ್ನಿ. ನಿಜಕ್ಕೂ ಸ್ವಾಭಿಮಾನವಿದ್ದರೆ ಉತ್ತರಿಸಿ ಎಂದು ಮಾಜಿ ಶಾಸಕ ರಾಜೇಶ್ ಅವರಿಗೆ ಪರೋಕ್ಷವಾಗಿ ಪ್ರಶ್ನಿಸಿದರು.
5 ವರ್ಷಗಳ ಆಡಳಿತಾವಧಿಯ ನಂತರ ನನ್ನ ಆಡಳಿತಾವಧಿಯಲ್ಲಿ ಕೈಗೊಳ್ಳುವ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಅವಲೋಕಿಸಿ ಸಮರ್ಥನಾಗಿದ್ದರೆ ಜನಪ್ರಿಯ ಶಾಸಕನ ಬಿರುದು ಕೊಡಿ, ಅಲ್ಲಿಯವರೆಗೂ ನಾನೊಬ್ಬ ಸಮರ್ಥ ಶಾಸಕನಾಗಿ ಸೇವೆ ಮಾಡಲು ತಾವು ಸಹಕರಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.
ಕೋಮುವಾದಿ ಬಿಜೆಪಿ ಪಕ್ಷ ಕಿತ್ತೆಸೆಯಿರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕಿವಿಮಾತಿನಂತೆ ದೇಶದಲ್ಲಿ ಕೋಮುವಾದಿ ಬಿಜೆಪಿ ಪಕ್ಷ ಕಿತ್ತೆಸೆಯೋಣ. ಡಬಲ್ ಇಂಜಿನ್ ಸರ್ಕಾರ ಎಂದು ಬೀಗುತ್ತಿದ್ದ ಬಿಜೆಪಿ ಸರ್ಕಾರದಿಂದ ಬೇಸತ್ತ ಮತದಾರರು, ಒಂದು ಇಂಜಿನ್ ಕತ್ತರಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೊಂದು ಇಂಜಿನ್ ಕಳಚಿ ಬೀಳಲಿದೆ ಎಂದು ಭವಿಷ್ಯ ನುಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ, ದಿ. ಇಮಾಂ ಸಾಬ್, ಅಶ್ವತ್ಥರೆಡ್ಡಿ ಅವರಂತಹ ಮುತ್ಸದ್ಧಿ ರಾಜಕಾರಣಿಗಳು ಜನಿಸಿದ ಜಗಳೂರು ಜಾತ್ಯತೀತ ಕ್ಷೇತ್ರವಾಗಿದೆ. ಪ್ರತಿಯೊಬ್ಬರೂ ಪಕ್ಷದ ನಿರ್ಣಯಕ್ಕೆ ಬದ್ಧರಾಗಿರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಡಿ ಏಕತೆ ಸಾರುವ ಸರ್ವಧರ್ಮ ಸಮಾನತೆಯ ಪ್ರತೀಕವಾಗಿರುವುದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಮಾಜಿ ಶಾಸಕ ಎಚ್.ಪಿ.ರಾಜೇಶ್ ನೇತೃತ್ವದಲ್ಲಿ ಪ್ರಮುಖ ಮುಂಚೂಣಿ ನಾಯಕರುಗಳು ಕಾಂಗ್ರೆಸ್ ಪಕ್ಷ ತೊರೆದು ಹೋದ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರು ಮೆಟ್ಟಿನಿಂತು ಸಂಕಷ್ಟ ಕಾಲದಲ್ಲಿ ಕೈಹಿಡಿದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಾಕ್ಷಿಯಾದ ನಿಮಗೆ ಕೃತಜ್ಞತೆಗಳು. ವೈಮನಸ್ಸು ತೊರೆದು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ದೇಶದಲ್ಲಿ ಎಲ್ಲಾ ವರ್ಗದವರ ನೆಮ್ಮದಿಗೆ ಕಾಂಗ್ರೆಸ್ ಪಕ್ಷದ ಆಡಳಿತ ಅವಶ್ಯಕ. ಮುಂಬರುವ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸೋಣ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಚನ್ನಯ್ಯ ಒಡೆಯರ್ ಪುತ್ರ ಡಾ.ಉದಯಶಂಕರ್ ಒಡೆಯರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಕಲ್ಲೇಶ್ ರಾಜ್ ಪಟೇಲ್, ಎಸ್.ಮಂಜುನಾಥ್, ಮುಖಂಡರಾದ ಜಯದೇವನಾಯ್ಕ, ಪಲ್ಲಾಗಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ಮಹೇಶ್, ಜೆ.ವಿ.ಸುಧೀರ್, ಬಿ. ತಿಮ್ಮಾರೆಡ್ಡಿ, ಯರಬಳ್ಳಿ ಉಮಾಪತಿ, ರೇವಣ್ಣಗೌಡ, ಓಮಣ್ಣ, ಗುರುಸಿದ್ದನಗೌಡ, ವಿಜಯ್ ಕೆಂಚೋಳ್, ತಿಪ್ಪೇಸ್ವಾಮಿ, ಅಹಮ್ಮದ್ ಅಲಿ, ಸಾವಿತ್ರಮ್ಮ, ಉಮಾದೇವಿ ಇದ್ದರು.