ಅತಂತ್ರ ರೈತರಿಗೆ ಸಾಲ ಪಡೆಯಲಾಗದೇ ಸಂಕಷ್ಟ
ದಾವಣಗೆರೆ, ನ. 26 – ಮೆಳ್ಳೆಕಟ್ಟೆ, ಅಣಜಿ ಹಾಗೂ ಲಿಂಗಾಪುರಗಳ 1,156 ಎಕರೆ ಜಮೀನು ವಶ ಪ್ರಕ್ರಿಯೆ ಅತ್ತ ಮುಂದುವರೆಯದೇ ಇತ್ತ ರದ್ದಾಗದೇ ರೈತರು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಕೈಗಾರಿಕಾ ಕಾರಿಡಾರ್ಗೆ ಎಂದು ಜಮೀನು ವಶಪಡಿಸಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಅದರಂತೆ ಜಮೀನು ವಶಕ್ಕೆ ಆದೇಶ ಹೊರಡಿಸಲಾಗಿತ್ತು. ಆದರೆ, ರೈತರು ಜಮೀನು ವಶವನ್ನು ತೀವ್ರವಾಗಿ ವಿರೋಧಿಸಿದ್ದರು.
ರೈತರ ವಿರೋಧವಿದ್ದ ಕಡೆಗಳಲ್ಲಿ ಕಾರಿಡಾರ್ಗೆ ಮುಂದಾಗುವುದಿಲ್ಲ ಎಂದು ಆಗಿನ ಬಿಜೆಪಿ ಸರ್ಕಾರ ಸಹ ತಿಳಿಸಿತ್ತು. ಆದರೆ, ಮೆಳ್ಳೆಕಟ್ಟೆ, ಅಣಜಿ ಹಾಗೂ ಲಿಂಗಾಪುರಗಳಲ್ಲಿ ಜಮೀನು ವಶ ಪ್ರಕ್ರಿಯೆ ವಾಪಸ್ ಪಡೆದಿರಲಿಲ್ಲ.
ಜಮೀನು ವಶದ ತೂಗುಕತ್ತಿಯಲ್ಲಿ ರೈತರು ಕಾಲ ಕಳೆಯುತ್ತಿದ್ದಾರೆ. ಸುಮಾರು ಒಂದು ವರ್ಷದಿಂದ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಜಮೀನು ವಶಕ್ಕೆ ತೆಗೆದುಕೊಳ್ಳಲು ಸರ್ಕಾರ ಗುರುತಿಸುವ ಕಾರಣ, ಅವುಗಳನ್ನು ಲಾಕ್ ಮಾಡಲಾಗಿದೆ. ರೈತರು ಬ್ಯಾಂಕುಗಳಿಂದ ಸಾಲ ಪಡೆಯಲು ತೀವ್ರ ಅಡ್ಡಿಯಾಗಿದೆ.
ಶೇ.80ಕ್ಕೂ ಹೆಚ್ಚು ರೈತರು ಜಮೀನು ಕೊಡಲು ಸಿದ್ಧವಿಲ್ಲ. ಈ ಬಗ್ಗೆ ಸರ್ವೆ ನಂಬರ್, ವಿಸ್ತೀರ್ಣ ಹಾಗೂ ಫೋನ್ ನಂಬರ್ಗಳ ಸಮೇತ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾ ಗಿದೆ ಎಂದು ಈ ಭಾಗದ ರೈತರು ತಿಳಿಸಿದ್ದರು.
ಜಮೀನು ನೀಡುವುದಿಲ್ಲ ಎಂದು ತಿಳಿಸಿದರೂ ಸಹ, ಅಧಿಕಾರಿಗಳ ಕಡೆಯಿಂದ ನೋಟಿಸ್ಗಳು ಬರುತ್ತಿದ್ದುದರಿಂದ ರೈತರು ಆತಂಕಗೊಂಡಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ನೋಟಿಸ್ ಬರುವುದು ನಿಂತಿದೆ. ಆದರೆ, ಸಾಲ ಪಡೆಯುವುದು ಮಾತ್ರ ಸಮಸ್ಯೆಯಾಗಿದೆ ಎಂದು ರೈತರು ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಜಮೀನು ವಶದ ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಪರಿಸ್ಥಿತಿ ಈಗ ಯಥಾಸ್ಥಿತಿಯಲ್ಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಮೆಳ್ಳೇಕಟ್ಟೆಯ ಮುಖಂಡರಾದ ಹನುಮಂತಪ್ಪ, ರೈತರು ಕಾರಿಡಾರ್ಗೆ ಜಮೀನು ನೀಡಲಾಗದು ಎಂಬ ನಿಲುವಿಗೆ ಈಗಲೂ ಬದ್ಧವಾಗಿದ್ದಾರೆ. ಸರ್ಕಾರ ಜಮೀನು ವಶ ಪ್ರಕ್ರಿಯೆ ಕೈ ಬಿಡಬೇಕು. ಲಾಕ್ ಮಾಡಿರುವ ಜಮೀನು ತೆರವುಗೊಳಿಸಿ ಸಾಲ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರಾದ ರವಿ ಕುಮಾರ್ ಅವರು ಮಾತನಾಡಿ, ತಮ್ಮ ಬಳಿ 6.5 ಎಕರೆ ಜಮೀನಿದ್ದರೂ ಬ್ಯಾಂಕ್ನಿಂದ ಸಾಲ ಪಡೆಯಲು ಆಗುತ್ತಿಲ್ಲ. ಕಚೇರಿಗಳಿಗೆ ಅಲೆದಾಡಿ ಸಾಕಾಗಿದ್ದೇವೆ. ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಸಾಲ ಸಿಗುತ್ತಿಲ್ಲ ಎಂದಿದ್ದಾರೆ.
ನಾನಷ್ಟೇ ಅಲ್ಲದೇ, ನೂರಾರು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ತ್ವರಿತವಾಗಿ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಹುತೇಕ ರೈತರು ಜಮೀನು ವಶಕ್ಕೆ ವಿರುದ್ಧವಾಗಿದ್ದೇವೆ. ಸರ್ಕಾರ ಮತ್ತೆ ಕಾರಿಡಾರ್ಗಾಗಿ ಜಮೀನು ವಶಕ್ಕೆ ಮುಂದಾದರೆ ಹೋರಾಟ ನಡೆಸುತ್ತೇವೆ ಎಂದು ಹನುಮಂತಪ್ಪ ಹೇಳಿದ್ದಾರೆ.