ಸಾಸ್ವೆಹಳ್ಳಿ, ಮೇ 25- ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ವಿಪರೀತ ಜ್ವರ ಕಾಣಿಸಿಕೊಳ್ಳುತ್ತಿದೆ. ನಂತರ ಎರಡು ಕಾಲುಗಳು ಊದಿಕೊಳ್ಳುತ್ತವೆ, ಮೈಕೈ ನೋವು, ಸುಸ್ತು ಕಾಣಿಸಿಕೊಳ್ಳುತ್ತದೆ.
ನನಗೆ ಜ್ವರ ಬಂದು ಎರಡು ತಿಂಗಳು ಆಯ್ತು ಮಾತ್ರೆ ನುಂಗಿದಾಗ ಜ್ವರ ಇಲ್ಲ. ಎರಡು ತಿಂಗಳಿನಿಂದಲೂ ಕಾಲಿನ ಪಾದ, ಕೈ ಬೆರಳುಗಳಲ್ಲಿ ತುಂಬಾ ನೋವಿದೆ. ಕಾಲಿನಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ಗುಳಿಗೆಗಳನ್ನು ನುಂಗಿದರೆ ನೋವು ಇರುವುದಿಲ್ಲ. ಕೆಲಸ ಮಾಡಲು ಆಗುವುದಿಲ್ಲ. ತುಂಬಾ ಸುಸ್ತಾಗುತ್ತದೆ ಎನ್ನುತ್ತಾರೆ ಗ್ರಾಮದ ವಿಜಯ್ ಕುಮಾರ್.
ದಿನಾ ಎರಡು ಹೊತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಒಂದು ಹೊತ್ತು ಮಾತ್ರೆ ತೆಗೆದುಕೊಳ್ಳದಿದ್ದರೆ ನೋವು ಜಾಸ್ತಿ ಆಗುತ್ತಿದೆ. ಕೂತರೆ ಏಳಲು ಆಗುವುದಿಲ್ಲ. ಕೆಳಗೆ ಕೂರಲು ಆಗುವುದಿಲ್ಲ. ಕೈಯಿಂದ ಕೆಲಸ ಮಾಡಲು ಆಗುತ್ತಿಲ್ಲ. ನಮ್ಮೂರಿಗೆ ಮಳೆ ಬೇರೆ ಸರಿಯಾಗಿ ಆಗಿಲ್ಲ. ತೋಟಕ್ಕೆ ನೀರು ಹಾಯಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಅವರು.
ನಾವು ಕೂಲಿ ಕೆಲಸ ಮಾಡಿ ಜೀವನವನ್ನು ನಡೆಸು ತ್ತೇವೆ. ನಮ್ಮೂರಿಗೆ ಮಾತ್ರ ಈ ವಿಚಿತ್ರ ಕಾಯಿಲೆ ಕಾಣಿಸಿ ಕೊಂಡಿದೆ. ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಈ ಕಾಯಿಲೆ ಹರಡುತ್ತಿದೆ. ಕೂಲಿಯೂ ಇಲ್ಲದೆ, ಕಾಯಿಲೆಯ ಔಷಧಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಡ್ರಿಪ್ ಹಾಕಿದರೆ ಮಾತ್ರ ಆರೋಗ್ಯವಂತರಾಗುತ್ತಿದ್ದೇವೆ ಎನ್ನುತ್ತಾರೆ ಚಂದ್ರಮ್ಮನವರು.
ನಮ್ಮ ಮನೆಯ ಸುತ್ತಮುತ್ತಲು ಸ್ವಚ್ಛವಾಗಿಟ್ಟುಕೊಂಡಿ ದ್ದೇವೆ. ವಾರದಲ್ಲಿ ಎರಡು, ಮೂರು ಸಲ ಮನೆಯ ನೀರಿನ ತೊಟ್ಟಿ, ಟ್ಯಾಂಕ್ಗಳ ನೀರು ಬದಲಾಯಿಸುತ್ತಿದ್ದೇವೆ. ತಿಂಗಳ ಹಿಂದೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ವರು ಬಂದು ರಕ್ತ ಪರೀಕ್ಷೆ ಮಾಡಿದರು. ನಂತರ ಏನು ಕ್ರಮ ತೆಗೆದುಕೊಂಡರೋ ಮಾಹಿತಿ ಇಲ್ಲ. ಮತ್ತೆ ಗ್ರಾಮದಲ್ಲಿ ಜ್ವರ ಹೆಚ್ಚಾಗುತ್ತಿದೆ. ಅಮ್ಮನ ಕಾಟ ಇರಬೇಕು ಎಂದು ಅಮ್ಮನ ಪೂಜೆಯನ್ನೂ ಮಾಡಲಾಯಿತು ಎನ್ನುತ್ತಾರೆ ಪ್ರೇಮ.
ಗ್ರಾಮದ 50 ಕ್ಕೂ ಹೆಚ್ಚು ಕುಟುಂಬಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಕಾಯಿಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹುಟ್ಟಿದ ಮಗುವಿನಿಂದ ಹಿಡಿದು ಸಾಯುವ ಮುದುಕರವರೆಗೂ ಈ ರೋಗಕ್ಕೆ ತುತ್ತಾದವರೇ ಹೆಚ್ಚಿನ ವರು ಇದ್ದಾರೆ. ಹೊನ್ನಾಳಿ ತಾಲ್ಲೂಕಿನ ಈ ಗ್ರಾಮದಲ್ಲಿ ಮಾತ್ರ ಈ ತರದ ಕಾಯಿಲೆ ಹೆಚ್ಚಾಗಿದೆ. ಅಮ್ಮನ ಕಾಟ ಇರಬೇಕು ಎಂದು ಗ್ರಾಮಸ್ಥರು ಅಮ್ಮನ ಪೂಜೆ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ಕಡಿಮೆಯಾಗಿದ್ದ ಈ ಕಾಯಿಲೆ ಮತ್ತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.
ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುನಾಥ್ ಕೆ.ಎಸ್. ಮಾತನಾಡಿ, ಮೇಲ್ನೋಟಕ್ಕೆ ಇದು ಚಿಕನ್ ಗುನ್ಯಾದ ಲಕ್ಷಣ ಇದೆ. ಇದೊಂದು ವೈರಲ್ ಫೀವರ್ ಆಗಿದೆ. ಸೊಳ್ಳೆಯಿಂದ ಈ ರೋಗ ಹರಡುತ್ತಿದೆ. ತಿಂಗಳ ಹಿಂದೆ ಹನುಮನಹಳ್ಳಿ ಗ್ರಾಮದಲ್ಲಿ ಮಾತ್ರ ಈ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತರಿಂದ ಸರ್ವೆ ಮಾಡಿಸಿ, ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ರಕ್ತದಲ್ಲಿ ಚಿಕನ್ ಗುನ್ಯದ ನೆಗೆಟಿವ್ ರಿಪೋರ್ಟ್ ಬಂದಿದೆ. ಒಂದರೆಡು ದಿನಗಳಿಂದ ಮತ್ತೆ ಆ ಗ್ರಾಮದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಶುಕ್ರವಾರದಿಂದ ಪುನಃ ಸರ್ವೆ ಮಾಡಿಸಲಾಗುವುದು. ರಕ್ತ ಸಂಗ್ರಹಿಸಿ ಪುನಃ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಹೇಳಿದರು. ಗ್ರಾಮದಲ್ಲಿ ಜನರು ಆತಂಕಕ್ಕೆ ಒಳಗಾಗದೆ ಸೊಳ್ಳೆಯಿಂದ ರಕ್ಷಿಸಿಕೊಳ್ಳಲು ಕ್ರಮವಹಿಸಲು, ಹೆಚ್ಚು ನೀರು ಕುಡಿಯಿರಿ, ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮವಹಿಸಿ, ಸೊಳ್ಳೆ ಬತ್ತಿ, ಮಲಗುವಾಗ ಸೊಳ್ಳೆ ಪರದೆ ಬಳಸಲು ಸೂಚಿಸಲಾಗಿದೆ. ಜ್ವರ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿದೆ ಎಂದರು.