ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಯವರು ಕಾಗಿನೆಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ನಂದಿಗುಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ರಾಜನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ರಾಣೇಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀಗಳು ಮತದಾನ ಮಾಡಿದರು.
ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ ಕೊಟ್ಟೂರಿನ ಶ್ರೀ ಮರುಳಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಹಕ್ಕನ್ನು ಚಲಾಯಿಸಿದರು.
ಚುನಾವಣೆಗಳು ಸಹ ಹಬ್ಬದಂತೆ ಆಚರಣೆಯಾದಾಗ ಯಶಸ್ಸು ಸಾಧ್ಯ
ದಾವಣಗೆರೆ, ಮೇ 10- ಚುನಾವಣೆಯನ್ನು ಹಬ್ಬದಂತೆ ಆಚರಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಮತದಾನ ಸಂವಿಧಾನ ನೀಡಿರುವ ಹಕ್ಕು ಪ್ರತಿಯೊಬ್ಬರೂ ಅದನ್ನು ಚಲಾಯಿಸಲೇ ಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿಗಳಾದ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು. ನಗರದ ಕಾಯಿಪೇಟೆಯ ಜೀಜಾಮಾತಾ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ನಗರ ದೇವತೆ ಹಬ್ಬ ಎರಡು ವರ್ಷಗಳಿಗೊಮ್ಮೆ ಬರುತ್ತದೆ. ಉಳಿದಂತೆ ಎಲ್ಲಾ ಹಬ್ಬಗಳನ್ನು ಪ್ರತಿ ವರ್ಷ ಸಂಭ್ರಮದಿದ ಆಚರಿಸುತ್ತಾ ಬರುತ್ತೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಬರುವ ವಿಧಾನಸಭಾ ಚುನಾವಣೆಯ ಹಬ್ಬವನ್ನೂ ಸಹ ಸಡಗರ, ಸಂಭ್ರಮದಿಂದ ಆಚರಿಸಬೇಕು. ತನ್ಮೂಲಕ ಸಮರ್ಥ ನಾಯಕನ ಆಯ್ಕೆ ಮಾಡುವ ಅಧಿಕಾರ ಮತದಾರರಿಗೆ ಇರುತ್ತದೆ ಎಂದರು.
ಉತ್ತಮ ವ್ಯಕ್ತಿ ಆಯ್ಕೆಯಾದರೆ ಕ್ಷೇತ್ರ ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಹೇಳಿದರು.