ದಾವಣಗೆರೆ, ಏ.18- ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ 1 ಸಾವಿರ ಬಡ ಕುಟುಂಬಗಳಿಗೆ ಉದ್ಯೋಗ ಮತ್ತು ಮನೆ ನಿರ್ಮಾಣ ಮಾಡಲಾಗುವುದು ಎಂದು ಸಂಯುಕ್ತ ವಿಕಾಸ ಪಕ್ಷ (ರಾಷ್ಟ್ರೀಯ) ಕರ್ನಾಟಕದ ರಾಷ್ಟ್ರೀಯ ಅಧ್ಯಕ್ಷ ಗಾನಶ್ರವಣ್ ಸ್ವಾಮೀಜಿ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಪ್ರಣಾಳಿಕೆ ಕುರಿತು ಮಾಹಿತಿ ನೀಡಿ ಪಕ್ಷವು ಕರ್ನಾಟಕದಲ್ಲಿ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು ಸಮಾಜ ಮುಖಿಯಾಗಿವೆಯಲ್ಲದೇ ಈಡೇರಿಸಲಾಗದ ಭರವಸೆಗಳನ್ನು ನಾವು ನೀಡುವುದಿಲ್ಲ ಎಂದರು.
ಅಂತರರಾಷ್ಟ್ರೀಯ ಚಿನ್ನದ ಹಾಗೂ ವಿಶೇಷ ಲೋಹಗಳ ವ್ಯಾಪಾರಿಯಾಗಿರುವ ನಾನು ಅದರಿಂದ ಬಂದ ಲಾಭದಲ್ಲಿ ಕರ್ನಾಟಕದ ಪ್ರತಿ ತಾಲೂಕಿನಲ್ಲಿ ನಮ್ಮ ಪಕ್ಷದ ಕಚೇರಿ ತೆರೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಪಕ್ಷದ ಕಚೇರಿಗಳು ಸಾರ್ವಜನಿಕ ಸಂಪರ್ಕ ಹಾಗೂ ಮಾಹಿತಿ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸುತ್ತೇವೆ. ಹಾಗೆಯೇ ಪ್ರತಿ ತಾಲ್ಲೂಕಿನಲ್ಲಿಯೂ 1000 ಬಡ ಕುಟುಂಬಗಳಿಗೆ ಕೆಲಸ ಹಾಗೂ ಮನೆಯನ್ನು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ದೇಶ, ವಿದೇಶಗಳಲ್ಲಿ ವಿವಿಧ ವ್ಯಾಪಾರ, ವಹಿವಾಟನ್ನು ಹೊಂದಿರುವ ನಾನು ಕೇರಳದ ಭಗವತಿ ದೇವಸ್ಥಾನದ ಅಭಿವೃದ್ಧಿಗೆ 700 ಕೋಟಿ ರೂ. ದೇಣಿಗೆ ನೀಡಿದ್ದೇನೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಜನರ ಸೇವೆ ಮಾಡಲು ಬಯಸಿದ್ದೇನೆ.
– ಗಾನಶ್ರವಣ್ ಸ್ವಾಮೀಜಿ, ರಾಷ್ಟ್ರೀಯ ಅಧ್ಯಕ್ಷರು, ಸಂಯುಕ್ತ ವಿಕಾಸ ಪಕ್ಷ (ರಾಷ್ಟ್ರೀಯ)
ಬಡವರಿಗೆ ಸುಸಜ್ಜಿತವಾದ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಹಾಗೂ ಹೈಟೆಕ್ ಶಾಲೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 10 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದ್ದೇವೆ.
ಪ್ರತಿ ತಾಲ್ಲೂಕಿನಲ್ಲಿ ಪ್ರತಿ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಸಿಗುವಂತೆ ಮಾಡಲಾಗುವುದು. ಜೊತೆಗೆ ಉಚಿತ ಶಾಲಾ ವಾಹನಗಳನ್ನೂ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ದೇಶದ 19 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಸಂಯುಕ್ತ ವಿಕಾಸ ಪಕ್ಷ (ರಾಷ್ಟ್ರೀಯ) ರಾಜ್ಯದಲ್ಲಿ ಈಗಾಗಲೇ 175 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಸುರ್ಜಿತ್ ಅವರು ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಲೋಹಿತ್, ಆಂಟೋನಿ, ವಿಜಯ್ ಮತ್ತಿತರರಿದ್ದರು.