ಕತ್ತಲಗೆರೆಯ ಉಚ್ಚಂಗೆಮ್ಮ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ರಂಭಾಪುರಿ ಶ್ರೀ
ಚನ್ನಗಿರಿ, ಮಾ.31- ಬದುಕಿನಲ್ಲಿ ಕಷ್ಟವೇ ಬರಲಿ, ಸುಖವೇ ಬರಲಿ ಅದಕ್ಕೆ ಭಗವಂತನೇ ಕಾರಣ. ಕಷ್ಟದ ಸೂತ್ರಧಾರಿ ಮತ್ತು ಪರಿಹಾರದ ಸೂತ್ರಧಾರಿ ದೇವರೇ ಆಗಿದ್ದಾನೆ. ಕಷ್ಟ ಬಂದಾಗ ಮೊದಲು ನೆನಪಾಗುವುದೇ ದೇವರು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಕತ್ತಲಗೆರೆ ಗ್ರಾಮದಲ್ಲಿ ಶ್ರೀ ಉಚ್ಚಂಗೆಮ್ಮ ದೇವಸ್ಥಾನ ಉದ್ಘಾಟನೆ ಮತ್ತು ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಬಹು ಜನ್ಮದ ಪುಣ್ಯದ ಫಲವಾಗಿ ಪಡೆದ ಮಾನವ ಜೀವನದಲ್ಲಿ ಧರ್ಮ, ದೇವರು ಮತ್ತು ಗುರುವನ್ನು ಮರೆಯಬಾರದು. ಬದುಕಿ ಬಾಳುವ ಮನುಷ್ಯನಿಗೆ ದೇವರು ಕೊಟ್ಟ ಸಂಪನ್ಮೂಲ ಅಪಾರ. ಬದುಕಿನಲ್ಲಿ ದೇವರ ಧ್ಯಾನ, ಸ್ಮರಣೆ ಮತ್ತು ಪೂಜೆ ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯನ ಬುದ್ಧಿ ಶಕ್ತಿ ಮತ್ತು ವಿಜ್ಞಾನಕ್ಕೆ ನಿಲುಕದೇ ಇರುವ ಅವ್ಯಕ್ತವಾದ ಅದ್ಭುತ ಶಕ್ತಿಯಿದೆ. ಅದನ್ನೇ ದೇವರು ಎಂದು ನಂಬಿ ಪೂಜಿಸುತ್ತಾ ಬಂದಿದ್ದೇವೆ.
ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣ ಗೊಂಡಿದೆ. ಶಕ್ತಿ ಬಿಟ್ಟು ಶಿವ, ಶಿವನ ಬಿಟ್ಟು ಶಕ್ತಿ ಇಲ್ಲ. ಅವೆರಡೂ ಅವಿನಾಭಾವ ಸಂಬಂಧದಿಂದ ಇವೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಸತ್ಯ ಶುದ್ಧವಾದ ಧರ್ಮಾಚರಣೆಯಲ್ಲಿ ಬಾಳಿ ಜೀವನದಲ್ಲಿ ಸುಖ, ಶಾಂತಿ ಪಡೆಯಬೇಕೆಂದರು.
ಕಣ್ವಕುಪ್ಪಿಯ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ರಾಂಪುರದ ರೇವಣಸಿದ್ಧ ಶಿವಾಚಾರ್ಯರು ಮತ್ತು ಕತ್ತಲಗೆರೆ ಬೃಹನ್ಮಠದ ಶಿವಕುಮಾರ ಉಮಾಪತಿ ಹಾಲಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಶ್ರೀಮತಿ ಅನಸೂಯಮ್ಮ ಮತ್ತು ಇತರರಿಗೆ ರಕ್ಷಾ ಕವಚವಿತ್ತು ಜಗದ್ಗುರುಗಳು ಆಶೀರ್ವದಿಸಿದರು.
ಮಹಾರುದ್ರಯ್ಯ ಸ್ವಾಗತಿಸಿದರು. ತೆಲಗುಂದದ ಗುರುಸ್ವಾಮಿ ನಿರೂಪಿಸಿದರು.