ಆಸೆ, ಆಮಿಷಗಳಿಗೆ ಬಲಿಯಾಗದೇ ಅರ್ಹರಿಗೆ ಪವಿತ್ರ ಮತ ಚಲಾಯಿಸಿ

ಆಸೆ, ಆಮಿಷಗಳಿಗೆ ಬಲಿಯಾಗದೇ ಅರ್ಹರಿಗೆ ಪವಿತ್ರ ಮತ ಚಲಾಯಿಸಿ

`ಮತದಾರರಿಗೆ ಜಾಗೃತಿ’ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಕರೆ

ದಾವಣಗೆರೆ, ಮಾ.31- ಯಾವುದೇ ಆಮಿಷಗಳಿಗೆ ಬಲಿಯಾಗದೇ ಪವಿತ್ರವಾದ ಮತವನ್ನು ಅರ್ಹ ಅಭ್ಯರ್ಥಿಗೆ ಚಲಾಯಿಸಿದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಗೌತಮ್ ಫೌಂಡೇಶನ್, ಶ್ರೀ ವಿಮೋಚನಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ 2023 ರ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ  ಹಮ್ಮಿಕೊಂಡಿದ್ದ `ಮತದಾರರಿಗೆ ಜಾಗೃತಿ’ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮತದಾನ ಪ್ರತಿಯೊಬ್ಬರ ಮೂಲಭೂತ ಕರ್ತವ್ಯ. ಚುನಾವಣಾ ಸಂದರ್ಭದಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ನಿರ್ಭಯವಾಗಿ ಮತದಾನದ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು.

ಮತದಾರರು ಪ್ರಜ್ಞಾವಂತರಾಗಬೇಕು ಮತ್ತು ಮೂಲಕ ತಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳಬಾರದು. ಅನರ್ಹ ವ್ಯಕ್ತಿಗೆ ಮತ ಹಾಕಿದರೆ ದೇಶದ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತದೆ. ಆಗ ಅವರನ್ನು ದೂಷಿಸುತ್ತಾ ಕಾಲಹರಣ ಮಾಡುತ್ತೇವೆ. ಇದು ಆಗಬಾರದು ಎಂದು ಹೇಳಿದರು. ಸಂವಿಧಾನದಲ್ಲಿ ಮಹಿಳೆಯರಿಗಾಗಿ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆ ಯರ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೊಳಿಸಿವೆ. ಪ್ರತಿ ಯೊಬ್ಬರಿಗೂ ಕಾನೂನು ಅರಿವು ಅವಶ್ಯ ಎಂದು ತಿಳಿಸಿದರು.

ಕಾನೂನು ಗೊತ್ತಿಲ್ಲ ಎಂದು ಕೈಕಟ್ಟಿ ಕುಳಿತರೆ ಅಥವಾ ತಪ್ಪು ಮಾಡಿದರೆ ಕಾನೂನು ರೀತಿಯ ಶಿಕ್ಷೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪೋಕ್ಸೋ, ಆಸ್ತಿ ಹಕ್ಕು, ವಿವಾಹ ವಿಚ್ಛೇದನ, ಮಾನವ ಕಳ್ಳ ಸಾಗಾಣಿಕೆ, ಬಾಲ್ಯ ವಿವಾಹ ಪದ್ಧತಿ ತಡೆ ಬಗ್ಗೆ ಇರುವ ಕಾನೂನುಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.

ಅನ್ಯಾಯಕ್ಕೊಳಗಾದವರಿಗೆ, ಶೋಷಿತ ಮಹಿಳೆಯರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಚಿತ ಕಾನೂನು ನೆರವು ನೀಡುತ್ತದೆ. ಎಸ್ಸಿ, ಎಸ್ಟಿ, ಹಾಗೂ 3 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಪುರುಷರಿಗೂ ಸಹ ಉಚಿತವಾಗಿ ಕಾನೂನು ನೆರವು ನೀಡಲಾಗುವುದು ಎಂದು ಹೇಳಿದರು.

ಮಹಿಳಾ ಪೊಲೀಸ್ ಠಾಣೆ ಪಿಐ ಎಂ.ಆರ್. ಚೌಬೆ ಮಾತನಾಡಿ, ಮತ ಎನ್ನುವುದು ಅಮೂಲ್ಯವಾದುದು. ಇದರ ಸದುಪಯೋಗವಾಗಲು ಅರ್ಹ, ಉತ್ತಮ ವ್ಯಕ್ತಿಗೆ ಮತ ನೀಡಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದೇ ಅಮೂಲ್ಯ ಮತದಾನದ ಹಕ್ಕನ್ನು ಹಾಳು ಮಾಡಿಕೊಳ್ಳದಿರಿ ಎಂದು ಸಲಹೆ ನೀಡಿದರು.

ಅನರ್ಹರಿಗೆ ಮತ ಹಾಕಿ, ಆಮಿಷಕ್ಕೆ ಬಲಿಯಾದರೆ ಅವರ ಅಡಿಯಾಳಾಗಿ ಬದುಕಾಬೇಕಾಗುತ್ತದೆ. ಸರಿಯಾದವರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂದರು.

ಗೌತಮ್ ಫೌಂಡೇಶನ್ ಅಧ್ಯಕ್ಷೆ ವನಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಠಾಣೆ ಪಿಎಸ್‌ಐ ಜಯಶೀಲಾ, ರೇಣುಕಾದೇವಿ  ಸ್ವಯಂ ಸೇವಾ ಸಂಸ್ಥೆ ನೇತ್ರಾವತಿ, ಸ್ಪೂರ್ತಿ ಸೇವಾ ಸಂಸ್ಥೆಯ ರೂಪಾನಾಯ್ಕ, ಸಂಕಲ್ಪ ಸ್ವಯಂ  ಸೇವಾ ಸಂಸ್ಥೆಯ ಸುರೇಶ್, ವಾಣಿ ಮಹಿಳಾ ಮಂಡಳಿಯ ಸುನಂದಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸುಧಾ ಪ್ರಾರ್ಥಿಸಿದರು. ದುರುಗೇಶ್ ನಿರೂಪಿಸಿದರು. ಗಂಗಮ್ಮ ವಂದಿಸಿದರು.

error: Content is protected !!