ಚನ್ನಗಿರಿ, ಮಾ. 5- ಭಾರತೀಯರ ಬದುಕನ್ನು ನಮಗೆ ಗೊತ್ತಿಲ್ಲದೆ ಅಮೆರಿಕಾ ಆವರಿಸಿಕೊಳ್ಳುತ್ತಿದೆ. ಪಿಜ್ಜಾ, ಬರ್ಗರ್, ಜೀನ್ಸ್ ಬಟ್ಟೆ ಮಾರಾಟ ಪ್ರಧಾನ ರಸ್ತೆಗಳಲ್ಲಿರುತ್ತವೆ. ಆದರೆ ನಮ್ಮ ರಾಗಿಮುದ್ದೆ ಖಾನಾವಳಿಗಳು ಮತ್ತು ಬಟ್ಟೆ ಹೊಲಿಯುವ ದರ್ಜಿಗಳನ್ನು ಸಂದಿ ಮೂಲೆಗಳಲ್ಲಿ ಹುಡುಕಿಕೊಂಡು ಹೋಗಬೇಕು ಎಂದು ಪ್ರೊ. ಎಂ.ಕೃಷ್ಣೇಗೌಡರು ಅಭಿಪ್ರಾಯಪಟ್ಟರು.
ಚನ್ನಗಿರಿ ತಾಲ್ಲೂಕು ಹರನಹಳ್ಳಿ-ಕೆಂಗಾಪುರ ಗ್ರಾಮದಲ್ಲಿ ನಡೆದ ದಾವಣಗೆರೆ ಜಿಲ್ಲಾ 12ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ’ ಕನ್ನಡ ನುಡಿಯ ಉಳಿವಿಗೆ ಗ್ರಾಮೀಣ ಜನರ ಕೊಡುಗೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹಿಂದೆ ನಗರಗಳನ್ನು ಹಳ್ಳಿಗಳು ಸಾಕುತ್ತಿದ್ದವು. ಈಗ ಹಳ್ಳಿಗಳು ನಗರಗಳಿಗೆ ಕೈಚಾಚುವಂತಾಗಿರುವುದು ವಿಪರ್ಯಾಸ ಎಂದರು. ಆರ್ಥಿಕ ಸ್ಥಿತ್ಯಂತರಗಳಿಂದ ಹಳ್ಳಿಗಳು ಸೊರಗುವಂತಾಗಿವೆ.
ಕೃಷಿಕರಿಗೆ ಹೆಣ್ಣು ಕೊಡಲು ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ. ಆದರೆ ಗ್ರಾಮೀಣ ಜನರ ಬದುಕಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಜೀವಂತಿಕೆಯಿಂದ ಕೂಡಿದೆ ಎಂದರು.
ಕನ್ನಡ ಸುಂದರವಾದ ಭಾಷೆ. ಅದರ ಸೊಗಡನ್ನು ಗ್ರಾಮೀಣರ ಬಾಯಿಯಲ್ಲಿ ಕೇಳುವುದೇ ಚಂದ. ನುಡಿಗಟ್ಟು ಮತ್ತು ಪದಗಳ ಅರ್ಥವನ್ನು ಬೇರೆ ಬೇರೆ ನೆಲೆಯಲ್ಲಿ ವಿಸ್ತರಿಸುವ ಗುಣ ಕನ್ನಡ ಭಾಷೆಯಲ್ಲಿದೆ ಎಂದು ಹೇಳಿದರು. ಪ್ರತಿಯೊಂದು ಗಿಡ ಮರ ಬಳ್ಳಿಗಳಿಗೆ, ವಸ್ತುಗಳಿಗೆ, ಕೃಷಿ ಪರಿಕರಗಳಿಗೆ, ಶರೀರದ ಅಂಗಾಂಗಗಳಿಗೆ, ಅಳತೆ ಮಾಪನಗಳಿಗೆ ಕನ್ನಡದಲ್ಲಿ ನಿಖರವಾದ ಪದಗಳಿವೆ. ಇಂಗ್ಲಿಷಿನಲ್ಲಿ ಈ ವೈವಿಧ್ಯತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸೋಮೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ ಎಂ ಸುರೇಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಶಿವಯೋಗಿ ಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು. ನಾಗರಾಜ ಸಿರಿಗೆರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.