ಜಗಳೂರು, ಫೆ.28- ಸಮಾಜಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಧತಿ ನಿಯಂತ್ರಿಸಲು ಕಾನೂನು ಜಾಗೃತಿ ಅಗತ್ಯ ಎಂದು ಜೆಎಂಎಫ್‌ಸಿ ಹಾಗೂ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಯೂನಿಸ್ ಅಥಣಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ, ಶಿಶು ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಇಲಾಖೆಗಳು ಹಾಗೂ ಬಾಲಕಾರ್ಮಿಕ ಯೋಜನಾ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಕಾಯ್ದೆ 1986 ಕುರಿತು `ಕಾನೂನು ಅರಿವು ನೆರವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ದೇವರ ಸಮಾನವಾಗಿ ಕಾಣುವ ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 26 ಸೆಕ್ಷೆನ್‌ಗಳನ್ನೊಳಗೊಂಡು 1986 ರಲ್ಲಿ ಜಾರಿಯಾಗಿದ್ದು. ಪರಿಪಾಲನೆ ಯಾಗದೆ ಇಂದಿಗೂ ಮಕ್ಕಳ ಮೇಲಿನ ದೌರ್ಜನ್ಯಗಳು, ಬಾಲಕಾರ್ಮಿಕ ನಿರ್ಮೂಲನೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ 14 ವರ್ಷದೊಳಗಿನ ಬಾಲಕರನ್ನು ದುಡಿಮೆಗೆ ಕಳಿಸದಂತೆ, 14 ವರ್ಷ ಮೇಲ್ಪಟ್ಟ ಕಿಶೋರರನ್ನು ಅಪಾಯಕಾರಿ ಸ್ಥಳಗಳಿಗೆ ಕೆಲಸದಿಂದ ಮುಕ್ತಿಗೊಳಿಸಲು ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತು ನೀಡುವುದು. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಸಲಹೆ ನೀಡಿದರು.
ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಓಂಕಾರೇಶ್ವರ್ ಮಾತನಾಡಿ, ಪೋಷಕರು ಮಕ್ಕಳ ಬದುಕು ಮತ್ತು ಬವಣೆಗಳನ್ನು ಅರಿತು ಭವಿಷ್ಯ ರೂಪಿಸಬೇಕು. ಆರ್ಥಿಕ ಸಂಕಷ್ಟಕ್ಕೆ ಬಾಲಕಾರ್ಮಿಕ ಪದ್ಧತಿ ಅನುಸರಣೆ ಸಲ್ಲದು. ಮಕ್ಕಳನ್ನು ದುಡಿಮೆಗೆ ಒಳಪಡಿಸಿದರೆ ಕಾನೂನಿನಡಿ ಶಿಕ್ಷೆಗಳು ಖಂಡಿತ ತಪ್ಪಿದ್ದಲ್ಲ. ಆದ್ದರಿಂದ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು.
ಆರೋಗ್ಯಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಹೋಟೆಲ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ ಪದ್ಧತಿಯ ಪರಿಣಾಮಗಳನ್ನು ಜಾಗೃತಿ ಮೂಡಿಸಲಾಗುತ್ತಿದೆ. ಇಟ್ಟಿಗೆ ಭಟ್ಟಿಯಲ್ಲಿ ಹೊರರಾಜ್ಯದಿಂದ ಆಗಮಿಸಿದ ವಲಸೆ ಬಾಲ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯೊಂದಿಗೆ ಸ್ವಗ್ರಾಮಕ್ಕೆ ಮರಳಿ ಕಳಿಸಿಕೊಡಲಾಯಿತು ಎಂದು ತಿಳಿಸಿದರು.
ಸಿಡಿಪಿಓ ಬೀರೇಂದ್ರಕುಮಾರ್, ಕಾರ್ಯದರ್ಶಿ ರುದ್ರೇಶ್, ಹಿರಿಯ ವಕೀಲ ವೈ. ಹನುಮಂತಪ್ಪ, ಸುರೇಶ್, ಪ್ರಸನ್ನಕುಮಾರ್ ಇತರರು ಉಪಸ್ಥಿತರಿದ್ದರು.