ಕೆ.ಎನ್. ಹಳ್ಳಿ: `ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಶಾಸಕ ರಾಮಪ್ಪ ಒತ್ತಾಯ
ಸ್ವಾತಂತ್ರ್ಯ ಸಿಕ್ಕ ನಂತರವೂ ದೇಶದಲ್ಲಿ ಹಸಿವಿನಿಂದ ಜನ ಸಾಯುತ್ತಿದ್ದರು . ಈಗ ಸಾಕಷ್ಟು ಬದಲಾವಣೆ ಆಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ.
– ಶಿವಾನಂದ ಕಾಪಶಿ, ಜಿಲ್ಲಾಧಿಕಾರಿ
ಮಲೇಬೆನ್ನೂರು, ಫೆ.23- ಕೆ.ಎನ್. ಹಳ್ಳಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯ ಕ್ರಮದಿಂದಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೇರಿದಂತೆ ಜಿಲ್ಲಾಡಳಿತ ಹಾಗೂ ಹರಿಹರ ತಾಲ್ಲೂಕು ಆಡಳಿತದ ಅಧಿಕಾರಿಗಳನ್ನು ಗ್ರಾಮಸ್ಥರು ಪೂರ್ಣ ಕುಂಭಮೇಳ ಹಾಗೂ ಕಲಾಮೇಳ ಗಳೊಂದಿಗೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಬರಮಾಡಿಕೊಂಡರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಶಾಸಕ ಎಸ್. ರಾಮಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಳ್ಳಿ ಜನರು ಸರ್ಕಾರಿ ಸೌಲಭ್ಯಕ್ಕಾಗಿ ಕಛೇರಿ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ, ಸರ್ಕಾರ ಈ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.
ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಇಂಜಿನಿಯರ್‌ಗಳ ನಿರ್ಲಕ್ಷದಿಂದಾಗಿ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಇನ್ನೂ ನೀರು ತಲುಪುತ್ತಿಲ್ಲ. ಇದರಿಂದಾಗಿ ರೈತರು ನಾಟಿ ಮಾಡಿಲ್ಲ. ಈ ಗ್ರಾಮದಲ್ಲಿ ಅನೇಕ ರೈತರ ಹೊಲಗಳಿಗೆ ನೀರು ಬಂದಿಲ್ಲ ಎಂದಾಗ ಸ್ಥಳದಲ್ಲಿದ್ದ ರೈತರು ಧ್ವನಿಗೂಡಿಸಿದರು. ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಕೊನೆ ಭಾಗಕ್ಕೆ ನೀರು ತಲುಪಿಸುವ ಕೆಲಸ ಮಾಡಿ ಎಂದು ಅವರು ಜಿಲ್ಲಾಧಿಕಾರಿಗಳಿಗೆ ಹೇಳಿದರು.
ಮೇಲ್ಭಾಗದಲ್ಲಿ ನೀರಿನ ನಿರ್ವಹಣೆ ಸರಿಯಾಗಿಲ್ಲದ ಕಾರಣದಿಂದಾಗಿ ನಮ್ಮ ತಾಲ್ಲೂಕಿಗೆ ಬರಬೇಕಾದ ಪ್ರಮಾಣದ ನೀರು ಬರುತ್ತಿಲ್ಲ ಎಂದು ದೂರಿದ ರಾಮಪ್ಪ, ನೀರಿನ ಸಮಸ್ಯೆ ಪರಿಹಾರಕ್ಕಾಗಿ ಇಂಜಿನಿಯರ್‌ಗಳು, ಸೌಡಿಗಳು, ಹಗಲು-ರಾತ್ರಿ ಎನ್ನದೇ ಕಾಲುವೆಗಳ ಮೇಲೆ ಸಂಚರಿಸಿ ನೀರಿನ ನಿರ್ವಹಣೆ ಮಾಡಬೇಕೆಂದರು. ಈ ಗ್ರಾಮದಲ್ಲಿರೋ ನಿವೇಶನ ಸಮಸ್ಯೆ ಬಗೆಹರಿಸಿ, ಬಹಳ ವರ್ಷಗಳಿಂದ ಅದೇ ಜಾಗದಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ನೀಡುವಂತೆ ಮತ್ತು ಹರಿಹರ ತಾಲ್ಲೂಕಿನಲ್ಲಿ ಬಗರ್‌ಹುಕ್ಕುಂ ಸಮಸ್ಯೆ ಹಾಗೂ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ಇ ಸ್ವತ್ತು ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಎಂದು ಶಾಸಕ ರಾಮಪ್ಪ ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಲೂ ದೇಶದ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು. ಹಸಿವಿನಿಂದ ಜನ ಸಾಯುತ್ತಿದ್ದರು. ಅಮೇರಿಕದಿಂದ ಉಪ್ಪಿಟ್ಟಿನ ರವೆ, ಎಣ್ಣೆ ತರಿಸುತ್ತಿದ್ದರು. ಹುಟ್ಟಿದ ಸಾವಿರ ಮಕ್ಕಳ ಪೈಕಿ 100 ಮಕ್ಕಳು ಅಪೌಷ್ಠಿಕತೆಯಿಂದ ಸಾಯುತ್ತಿದ್ದರು. ಈಗ ಆ ಸಂಖ್ಯೆ 15 ಕ್ಕೆ ಇಳಿದಿದೆ. ಹೆರಿಗೆ ಸಂದರ್ಭದಲ್ಲಿ ರಕ್ತಪಾತವಾಗಿ ಮಹಿಳೆಯರು ಸಾಯುತ್ತಿದ್ದರು. ಈಗ ಶೇ 100 ಕ್ಕೆ 100 ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲೇ ಆಗುತ್ತಿರುವುದರಿಂದ ಸಾವಿನ ಸಂಖ್ಯೆ ಬಹಳ ಕಡಿಮೆ ಆಗಿದೆ. ಆಗ ಜೀವಿತಾವಧಿ ಬಹಳ ಕಡಿಮೆ ಇತ್ತು. ಈಗ ಸರಾಸರಿ ಜೀವಿತಾವಧಿ 68 ವರ್ಷಗಳಾಗಿವೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಾವು ಸಾಕಷ್ಟು ಪ್ರಗತಿ ಸಾಧಿಸುತ್ತಾ ಬಂದಿದ್ದರೂ ನಾವು ಸಾಗಿ ಬಂದ ಹಾದಿಯ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ತುಂಬಾ ಅಗತ್ಯ ಎಂದು ಹೇಳಿದರು.
ನಮ್ಮ ದೇಶ ಹಾಗೂ ನಮ್ಮ ಜನರ ಅಭಿವೃದ್ಧಿಗೆ ನಮಗೆ ಹೆಮ್ಮೆ ಇರಬೇಕು. ಸೌಹಾರ್ದ, ಸಾಮರಸ್ಯದ ಸಹಬಾಳ್ವೆ ಇದ್ದರೆ ಉತ್ತಮ ಹಾಗೂ ಬಲಿಷ್ಠ ಸಮಾಜ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸಿ ಹಳ್ಳಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡಿಸುವ ಕೆಲಸವನ್ನು ಅಧಿಕಾರಿಗಳ ಮೂಲಕ ಮೂಡಿಸುತ್ತಿದೆ. ನಿಮ್ಮ ಸಮಸ್ಯೆ ಏನೇ ಇದ್ದರೂ ನಮಗೆ ತಿಳಿಸಿ ಸಾಧ್ಯವಾದಷ್ಟು ಇಲ್ಲಿಯೇ ಬಗೆಹರಿಸಲು ಪ್ರಯತ್ನಿಸುತ್ತೇವೆ. ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ಒದಗಿಸುವ ಬಗ್ಗೆ ಇಂಜಿನಿಯರ್‌ಗಳ ಜೊತೆ ಚರ್ಚಿಸುತ್ತೇನೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ರೈತ ಸಂಘದ ಪ್ರಭುಗೌಡ ಅವರು, ಭೂ ದಾಖಲೆಗಳ ಇಲಾಖೆಯಿಂದ ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುತ್ತಿಲ್ಲ. ಕೊನೆ ಭಾಗದ ರೈತರಿಗೆ ನೀರು ತಲುಪಿಸುವ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿ, ಶಾಸಕ ರಾಮಪ್ಪ ಅವರ ಸ್ಪಂದನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಹೆಚ್‌ಓ ಡಾ. ನಾಗರಾಜ್ ಮಾತನಾಡಿ, ಪ್ರತಿಯೊಬ್ಬರೂ ಎಬಿಆರ್‌ಕೆ ಕಾರ್ಡ್ ಮಾಡಿಸಿ, 5 ಲಕ್ಷ ರೂ. ವೆಚ್ಚದ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಜಿಲ್ಲೆಯಲ್ಲಿರುವ 18 ಲಕ್ಷ ಜನರ ಪೈಕಿ 3.50 ಲಕ್ಷ ಜನರಿಗೆ ಈಗಾಗಲೇ ಕಾರ್ಡ್ ನೀಡಿದ್ದೇವೆ. ಕಣ್ಣಿನ ತೊಂದರೆ ಇರುವ ಶಾಲಾ ಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ನೀಡುತ್ತೇವೆ ಎಂದರು.
ಉಪತಹಶೀಲ್ದಾರ್ ಆರ್. ರವಿ ಸ್ವಾಗತಿಸಿದರು. ತಹಶೀಲ್ದಾರ್ ಪೃಥ್ವಿಸಾನಿಕಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎನ್. ಹಳ್ಳಿ ಗ್ರಾ.ಪಂ. ಅಧ್ಯಕ್ಷ ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ವಿ. ಕುಬೇರಪ್ಪ, ಲೋಕೇಶ್, ಪುಷ್ಪಾ, ಕಾಮಾಕ್ಷಿ, ಪರಶುರಾಮ್, ಅನಿತಾ, ಹುಸೇನ್‌ಸಾಬ್, ಮಂಜಮ್ಮ, ಭರಮಗೌಡ ಪಾಟೀಲ್, ರೇಖಾ, ಪಿಡಿಓ ಶಿಲ್ಪಾ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ರವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಡಿಪಿಓ ನಿರ್ಮಲ, ತೋಟಗಾರಿಕೆ ಇಲಾಖೆಯ ರೇಖಾ, ಟಿಹೆಚ್‌ಓ ಡಾ. ಚಂದ್ರಮೋಹನ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಆಡಳಿತಾಧಿಕಾರಿಗಳಾದ ಆನಂದ್‌ತೀರ್ಥ, ಅಣ್ಣಪ್ಪ, ಶಿವಕುಮಾರ್, ಸುಭಾನಿ, ಸೌಮ್ಯ, ಮಂಜುಳಾ, ಬೋರಯ್ಯ, ದೇವರಾಜ್, ದೊಡ್ಡಬಸವರಾಜ್, ಶ್ರೀಧರ್ ಮತ್ತು ಗ್ರಾಮದ ಹುಗ್ಗಿ ರೇವಣಪ್ಪ, ಬಸವನಗೌಡ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಮತ ಯಂತ್ರದ ಪ್ರಾತ್ಯಕ್ಷತೆಯನ್ನು ಶಿಕ್ಷಕ ರೇವಣನಾಯ್ಕ ನಡೆಸಿಕೊಟ್ಟರು. ಸಿಆರ್‌ಪಿ ಬಸವರಾಜಯ್ಯ ಕಾರ್ಯಕ್ರಮ ನಿರೂಪಿಸಿದರೆ, ತಾ.ಪಂ.ನ ಜಿ. ಸುನೀಲ್ ವಂದಿಸಿದರು.