ರಾಣೇಬೆನ್ನೂರು, ಫೆ.14- ಸಾಲ ಮನ್ನಾದ ಬಗ್ಗೆ ಹಗುರವಾಗಿ ಮಾತನಾಡಿದ ತೇಜಸ್ವಿ ಸೂರ್ಯ ಅವರನ್ನು ಪಕ್ಷದಿಂದ ವಜಾಗೊಳಿಸಿ, ನಾಳೆಯ ಬಜೆಟ್‍ನಲ್ಲಿ ಡಬಲ್ ಇಂಜಿನ್ ಸರ್ಕಾರ ರೈತರ ಸಾಲ ಮನ್ನಾ ಯೋಜನೆ ಘೋಷಿಸಿ ರೈತ ಪರ ಸರ್ಕಾರ ಎನ್ನುವುದನ್ನು ಮುಖ್ಯ ಮಂತ್ರಿಗಳು ಸಾಬೀತು ಪಡಿಸಬೇಕು ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಒತ್ತಾಯಿಸಿದ್ದಾರೆ.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಹತ್ತಿರ ರೈತಪರ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ, ರಸ್ತೆ ತಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕಳೆದ 14 ವರ್ಷಗಳಲ್ಲಿ ವಿಜಯ ಮಲ್ಯ, ನೀರವ್ ಮೋದಿ, ಅದಾನಿ, ಅಂಬಾನಿಯಂತಹ ಬಂಡವಾಳ ಶಾಹಿಗಳ ಹದಿನಾಲ್ಕು ಲಕ್ಷ ಕೋಟಿ. ರೂ. ಸಾಲ ಮನ್ನಾ ಮಾಡಿದ ಕೇಂದ್ರ ಸರ್ಕಾರ ರೈತರ ವಿಚಾರದಲ್ಲಿ ಮಾತ್ರ ಮೊಸಳೆ ಕಣ್ಣೀರು ಸುರಿಸುತ್ತಿದೆ. ರೈತರಿಗೊಂದು ನ್ಯಾಯ? ಉದ್ಯಮಿಗಳಿಗೊಂದು ನ್ಯಾಯಾನಾ? ಅಂತಾ ಪಾಟೀಲರು ಪ್ರಶ್ನಿಸಿದ್ದಾರೆ.
2008-09 ನೇ ಸಾಲಿನಲ್ಲಿ ಆಗಿನ ಪ್ರಧಾನ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ದೇಶದ ರೈತರ 78 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿತು, ರೈತರು ಇಷ್ಟೊಂದು ಆರ್ಥಿಕ ತೊಂದರೆಯಲ್ಲಿರಲಿಲ್ಲ. ರೈತರ ಆತ್ಮಹತ್ಯೆಯೂ ದೇಶದಲ್ಲಿ ನಡೆಯುತ್ತಿರಲಿಲ್ಲ. ಆದರೆ ರೈತಾಪಿ ವರ್ಗ ಅತೀವೃಷ್ಟಿ, ಅನಾವೃಷ್ಠಿ, ಕೊರೊನಾ, ಲಾಕ್‍ಡೌನ್‍ನಿಂದ ಆರ್ಥಿಕ ತೊಂದರೆಗೆ ಸಿಲುಕಿ ದಿನನಿತ್ಯ ಸರಣಿ ರೈತ ಆತ್ಮಹತ್ಯೆಗಳು ನಡೆಯುತ್ತಲಿವೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳ ತವರು ಜಿಲ್ಲೆ ರೈತರ ಆತ್ಮಹತ್ಯೆಯಲ್ಲಿ ಪ್ರಥಮ ಸ್ಥಾನದ ಲ್ಲಿದೆ. ಹೀಗಿರುವಾಗ ನಾಳೆಯ ಬಜೆಟ್‍ನಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕಿನ ಲ್ಲಿರುವ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಯೋಜನೆ ಘೋಷಿಸಬೇಕು. ಇಲ್ಲದಿ ದ್ದರೆ ಬರುವ ಚುನಾವಣೆಯಲ್ಲಿ ರೈತರು ತಮಗೆ ತಕ್ಕ ಪಾಠ ಕಲಿಸುತ್ತಾರೆಂದು ಎಚ್ಚರಿಸಿದರು.
ರೈತ ಮುಖಂಡರಾದ ಬಿ.ಕೆ. ರಾಜನಹಳ್ಳಿ, ಇಕ್ಬಾಲ್ ಸಾಬ್ ರಾಣೇಬೆನ್ನೂರು, ಚಂದ್ರಣ್ಣ ಬೇಡರ, ಸುರೇಶಪ್ಪ ಗರಡಿಮನಿ, ರೇಣುಕಾ ಲಮಾಣಿ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್‍ರ ಮೂಲಕ ಮನವಿ ಸಲ್ಲಿಸಲಾಯಿತು. ತಹಶೀಲ್ದಾರರ ಪರವಾಗಿ ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮನವಿ ಸ್ವೀಕರಿಸಿದರು.
ರೈತ ಮುಖಂಡರಾದ ಹರಿಹರಗೌಡ ಪಾಟೀಲ, ಚಾಮನಗೌಡ ಪಾಟೀಲ, ಗುರುರಾಜ ಗೊಜನೂರ, ಶಂಕರಗೌಡ ಪಾಟೀಲ, ಕರಬಸಪ್ಪ ಕೂಲೇರ, ವಕೀಲರಾದ ರಮೇಶ ಗೊಂದಳ್ಳಿ, ಮರಡೆಪ್ಪ ಚಳಗೇರಿ, ಕೊಟ್ರಪ್ಪ ಹೊನ್ನತ್ತಿ, ಯಲ್ಲಪ್ಪ ಓಲೇಕಾರ ಮತ್ತಿತರರು ಭಾಗವಹಿಸಿದ್ದರು.