ದಾವಣಗೆರೆ, ಫೆ. 8- ರಾಜಕೀಯ ಸೇರಿದಂತೆ ಸಮಾಜದ ಎಲ್ಲಾ ಸ್ತರಗಳಲ್ಲೂ ಸಾವಯವ ಪದ್ಧತಿ ಅಳವಡಿಕೆ ಅಗತ್ಯವಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಿಸಿದರು.
ತಾಲ್ಲೂಕಿನ ಕಾರಿಗನೂರು ಗ್ರಾಮದಲ್ಲಿ ರೈತ ರಮೇಶ್ ಅವರು ಪ್ರಧಾನಮಂತ್ರಿ ಕಿರು ಉದ್ಯಮ ಯೋಜನೆಯಡಿ ಆರಂಭಿಸಿರುವ ಸ್ವದೇಶಿ ಅಡಿಕೆ ಮಿಲ್‌ಗೆ ಚಾಲನೆ ನೀಡಿ ಅವರು ಮಾತನಾಡಿ ದರು. ಕೇವಲ ಕೃಷಿಯಲ್ಲಿ ಮಾತ್ರವೇ ಸಾವಯವ ಪದ್ಧತಿ ಅನುಕರಣೆಯಾಗದೇ ಮನುಷ್ಯರ ಬದುಕಿನ ಎಲ್ಲ ಸಂದರ್ಭಗಳಲ್ಲೂ ಸಾವಯವ ಪದ್ಧತಿಯ ಅವಶ್ಯಕತೆ ಇದೆ. ಆಗ ಮಾತ್ರ ಆದರ್ಶ ಜೀವನ ಸಾಧ್ಯವಾಗಲಿದೆ ಎಂದು ಹೇಳಿದರು.
ನಮ್ಮ ಆರ್ಥಿಕ ಮಟ್ಟ ಹೆಚ್ಚಾದ ಹಾಗೆ ಭ್ರಷ್ಟಾಚಾರವೂ ಹೆಚ್ಚಾಗುತ್ತಿದೆ. ನೈತಿಕ ಮಟ್ಟ ಕುಸಿಯುತ್ತಿದೆ. ಮೌಲ್ಯಗಳು ಅರ್ಥ ಕಳೆದುಕೊಳ್ಳು ತ್ತಿವೆ. ಸಾವಯವ ನಮ್ಮೆಲ್ಲರ ಬದುಕಿನಲ್ಲಿ ಇಲ್ಲದೇ ಇರುವ ಪರಿಣಾಮ ಈ ಎಲ್ಲವೂ ನಮ್ಮಿಂದ ದೂರವಾಗುತ್ತಿವೆ ಎಂದು ವಿಷಾದಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಏಕಬೆಳೆ ಪದ್ಧತಿ ಕೈ ಬಿಟ್ಟು ಸಮಗ್ರ ಬೆಳೆ ಪದ್ಧತಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಕೋಲಾರ ಜಿಲ್ಲೆಯ ರೈತರು ಸಮಗ್ರ ಕೃಷಿ ಪದ್ದತಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಯೋಜನೆಯಡಿ ಆಹಾರ ಸಂಸ್ಕರಣೆ ಸೇರಿದಂತೆ ಯಾವುದೇ ಕೃಷಿ ಉತ್ಪನ್ನ ಘಟಕ ಆರಂಭ ಮಾಡಲು ಮುಂದೆ ಬಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50 ರಷ್ಟು ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡಲಿದೆ. ರೈತರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಶಾಸಕ ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ, ಜಿ.ಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಲೇಶಪ್ಪ, ನಿರ್ದೇಶಕ ಜಗದೀಶಪ್ಪ ಬಣಕಾರ್, ವ್ಯವಸ್ಥಾಪಕ ನಿರ್ದೇಶಕ ತಾವರಾನಾಯ್ಕ ಇತರರಿದ್ದರು.