ಭರಮಸಾಗರ, ಫೆ. 2- ಪಟ್ಟಣದಲ್ಲಿ ಎರಡು ದಶಕಗಳಿಂದ ಬೇಡಿಕೆಯಿರುವ ಪದವಿ ಪೂರ್ವ ಕಾಲೇಜು ಹಾಗೂ ಹೆಚ್ಚುವರಿ ಶಾಲಾ ಕಟ್ಟಡಗಳನ್ನು ನಿರ್ಮಿಸಬೇ ಕೆಂದು ಒತ್ತಾಯಿಸಿ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಪಾದಯಾತ್ರೆ ಕೈಗೊಂಡರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದಿಂದ ಆರಂಭವಾದ ಪಾದಯಾತ್ರೆ ಹಳೇ ಬಸ್ ನಿಲ್ದಾಣದ ಮೂಲಕ ಹೊಸ ಬಸ್ ನಿಲ್ದಾಣ, ಪ್ರವಾಸಿ ಮಂದಿರ, ರಾಷ್ಟ್ರೀಯ ಹೆದ್ದಾರಿ 84ರ ಬೈಪಾಸ್ ರಸ್ತೆಯಲ್ಲಿ ಸಾಗಿತು.
ಪದವಿಪೂರ್ವ ಕಾಲೇಜಿನ ಮನವಿ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿ ಕಚೇರಿಯಿಂದ ಆದೇಶ ನೀಡಿದ್ದರೂ ಸಹ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಗೊಳಿಸಲಾಗುವುದು.
– ಪಿ. ಸೂರಪ್ಪ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ
ಶಿಕ್ಷಣಕ್ಕೆ ಒತ್ತು ನೀಡಬೇಕಾದ ಸರ್ಕಾರ ಇಲ್ಲಿ ಅವಶ್ಯಕವಾಗಿರುವ ಪಿ.ಯು. ಕಾಲೇಜನ್ನು ಈ ವರ್ಷದಿಂದಲೇ ಆರಂಭಿಸಬೇಕು. ಅಗತ್ಯ ಕಟ್ಟಡದ ವ್ಯವಸ್ಥೆ ಮಾಡಬೇಕು.
– ಮಂಜುಳಾ ಕರಿಬಸಪ್ಪ, ಗ್ರಾ.ಪಂ.ಅಧ್ಯಕ್ಷೆ
ಏನಿದು ಪಾದಯಾತ್ರೆ : ಮಕ್ಕಳನ್ನು ಹೆಚ್ಚು ಡೊನೇಷನ್ ಕೊಟ್ಟು ದೂರದ ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿ ಓದಿಸಲು ಸಾಧ್ಯವಾಗುತ್ತಿಲ್ಲ. ಎಸ್ಸೆಸ್ಸೆಲ್ಸಿ ನಂತರ ಹೊರಬಂದ ವಿದ್ಯಾರ್ಥಿಗಳು ಮುಂದಿನ ವ್ಯಾಸಂಗಕ್ಕೆ 40 ಕಿ.ಮೀ. ದೂರದ ನಗರಕ್ಕೆ ಹೋಗಬೇಕಾಗಿದೆ ಹಾಗೂ ಕೇಳಿದಷ್ಟು ಡೊನೇಷನ್ ಕೊಡಬೇಕಾಗಿದೆ. ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಕಾರಣ ಪ್ರತಿ ವರ್ಷ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಜಾಗವಿದ್ದರೂ ಪ್ರೌಢಶಾಲೆ ಮಕ್ಕಳಿಗೆ ಕೊಠಡಿಗಳು ಇರುವುದಿಲ್ಲ ಎನ್ನುತ್ತಾರೆ ಪಾದಯಾತ್ರಿಗಳು.