ಜಗಳೂರು, ಜ.30- ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮ್ಮೇಳನವನ್ನು ಬಯಲುರಂಗ ಮಂದಿರ ಆವರಣದಲ್ಲಿ ಫೆಬ್ರವರಿ 25ರ ಶನಿವಾರ ನಡೆಸಲು ತೀರ್ಮಾನಿಸಲಾಯಿತು.
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬರದ ನಾಡಿನಲ್ಲಿ ಕಾರ್ಮಿಕ, ರೈತ, ಬಡ ಕೂಲಿಕಾರ್ಮಿಕರಿಂದ, ಕನ್ನಡಪರ ಅಭಿಮಾನಿಗಳಿಂದ ದೇಣಿಗೆ ಸಂಗ್ರಹಣೆ ಅಗತ್ಯವಿದೆ ಎಂದು ಸಾಹಿತಿಗಳಾದ ಎನ್.ಟಿ.ಎರ್ರಿಸ್ವಾಮಿ ಸಲಹೆ ನೀಡಿದರು.
`ಬರದನಾಡಿನಲ್ಲಿ ಬಹಳ ವರ್ಷಗಳ ನಂತರ ಕಸಾಪ ಸಮ್ಮೇಳನ ಆಯೋಜಿಸಿರುವುದು ಸಂತಸದ ಸಂಗತಿ. ದಲಿತಪರ ಸಂಘಟನೆಗಳಿಂದ ಸಮ್ಮೇಳನಕ್ಕೆ ಸರ್ವ ಸಹಕಾರವಿದೆ. ದಲಿತ ಕವಿಗಳನ್ನು ಗುರುತಿಸಿ, ಸಾಹಿತ್ಯ ಗೋಷ್ಠಿಗಳಿಗೆ ಆಹ್ವಾನಿಸಬೇಕು.
ಸಮ್ಮೇಳನದಲ್ಲಿ ಸ್ಥಳೀಯ ಕಲಾವಿದರನ್ನು ಸದ್ಬಳಕೆ ಮಾಡಿಕೊಂಡು ಖರ್ಚು ಮಿತಗೊಳಿಸಿ, ಉನ್ನತ ಸಾಧಕರಿಗೆ ಮಾತ್ರ ಪುರಸ್ಕರಿಸಬೇಕು ಎಂದು ದಲಿತ ಮುಖಂಡರಾದ ಶಂಭುಲಿಂಗಪ್ಪ, ಓಬಣ್ಣ, ಅಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ಅಧ್ಯಕ್ಷರಾದ ಸುಜಾತಮ್ಮ ಮಾತನಾಡಿ, ತಾಲ್ಲೂಕು ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು. ಸಮ್ಮೇಳನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅನುದಾನ ಒಂದು ಲಕ್ಷ ರೂ. ಲಭ್ಯವಿದ್ದು, ಸಮ್ಮೇಳನಕ್ಕೆ ಹೆಚ್ಚಿನ ಆರ್ಥಿಕ ಸಂಪನ್ಮೂಲದ ಅಗತ್ಯವಿದೆ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಸಂತೋಷ್ ಕುಮಾರ ಮಾತನಾಡಿ, ಎಲ್ಲರ ಅಭಿಪ್ರಾಯದಂತೆ ಶಾಸಕರ ಅನುಪಸ್ಥಿತಿಯಲ್ಲಿ ತುರ್ತಾಗಿ ಕಸಾಪ ತಾಲ್ಲೂಕು ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ತಮ್ಮ ಸಮಿತಿಗಳ ಸಲಹೆಯಂತೆ ನಾವು ಬದ್ದ, ಶೀಘ್ರದಲ್ಲಿ ತಾಲ್ಲೂಕಿನ ಸಮಾಜ, ಸಂಘಟನೆ, ಸಾಹಿತ್ಯಾಭಿಮಾನಿಗಳನ್ನು ಒಳಗೊಂಡು ಜವಾಬ್ದಾರಿ ವಹಿಸಿದರೆ ಕಾರ್ಯಕ್ರಮ ಅನುಷ್ಠಾನ ಸಾಧ್ಯ. ಮನಸ್ತಾಪಗಳು ಆಗದಂತೆ ನೋಡಿಕೊಳ್ಳೋಣ. ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇತರೆ ಹಿತೈಷಿಗಳಿಂದ ಧನ ಸಹಾಯ ಕಾರ್ಯಕ್ರಮದ ರೂಪು-ರೇಷೆಗಳನ್ನು ತಯಾರಿಸಲು ಮತ್ತೊಂದು ಸಭೆಯಲ್ಲಿ ಕಾರ್ಯಕ್ರಮದ ಬಜೆಟ್ ತಯಾರಿಸೋಣ ಎಂದು ಹೇಳಿದರು.
ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಪ್ರಾಂಶುಪಾಲ ಬಿ. ನಾಗಲಿಂಗಪ್ಪ, ಪ.ಪಂ ಸದಸ್ಯ ಲುಕ್ಮಾನ್ ಖಾನ್, ಎನ್.ಜಿ.ಓ ತಾಲ್ಲೂಕು ಅಧ್ಯಕ್ಷ ಚಂದ್ರಪ್ಪ, ಸಾಹಿತಿ ಗೀತಾ ಮಂಜು, ಕಸಾಪ ಸದಸ್ಯ ಕೃಷ್ಣಮೂರ್ತಿ, ರವಿಕುಮಾರ್, ಗೌರಮ್ಮ, ವೀರಸ್ವಾಮಿ, ಸಿ.ತಿಪ್ಪೇಸ್ವಾಮಿ, ಸತೀಶ್, ಮಾದಿಹಳ್ಳಿ ಮಂಜುನಾಥ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.