ಮಾಯದಂತ ಮಳೆ ಬಂತು, ಮದಗಾದ ಕೆರೆ ತುಂಬ್ತು

ರಾಣೇಬೆನ್ನೂರು, ಆ.24- ಕಳೆದ 15 ದಿನಗಳಿಂದ ಸುರಿದ ಮಾಯದಂತ ಮಳೆಗೆ ಇತಿಹಾಸ ಪ್ರಸಿದ್ದ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಬಳಿಯ ಮದಗದ ಕೆರೆ ಮೈದುಂಬಿದ್ದು, ಜಲಪಾತದ ಗತವೈಭವ ಮರುಕಳಿಸಿ, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

1863 ರಲ್ಲಿ ಬ್ರಿಟಿಷರು ಕೆರೆಯಲ್ಲಿದ್ದ ಅಪಾರ ಜಲರಾಶಿಯನ್ನು ಕಂಡು ಅಭಿವೃದ್ಧಿ ಪಡಿಸಿ, ಸುರಂಗ ಮಾರ್ಗದ ಮೂಲಕ ತೂಬು ಗಳನ್ನು ನಿರ್ಮಿಸಿ, ಎಡದಂಡೆ ಹಾಗೂ ಬಲದಂಡೆ ಕಾಲುವೆ ಮೂಲಕ ಹೊಲಗದ್ದೆ ಗಳಿಗೆ ನೀರು ನೀಡಿದ್ದು, ಸುರಂಗ ಮಾರ್ಗ ದಲ್ಲಿ ನೀರು ಬೋರ್ಗರೆಯುತ್ತಿದೆ. ಬ್ರಿಟಿಷರ ನಂತರದಲ್ಲಿ ಮಾಸೂರಿನ ಮಲ್ಲನ ಗೌಡರು ಕೆರೆ ಜೀರ್ಣೋದ್ಧಾರ ಮಾಡಿರುವ ಪ್ರತೀತಿ ಇದೆ.

ಕೆರೆ ಒಡಲು ತುಂಬಿ ಕೋಡಿ ಬಿದ್ದಿದ್ದು, ಸುಮಾರು 300 ಅಡಿ ಆಳಕ್ಕೆ ನೀರು ದುಮ್ಮಿಕ್ಕುವ ಜಲಪಾತದ ರಮಣೀಯ ನಯನ ಮನೋಹರ ದೃಶ್ಯ  ಕಣ್ತುಂಬಿ ಕೊಳ್ಳಲು ನಾಡಿನ ವಿವಿಧೆಡೆ ಯಿಂದ ಪ್ರವಾಸಿಗರು ಬರುತ್ತಿದ್ದಾರೆ. ಪ್ಲಾಸ್ಟಿಕ್ ಮುಂತಾದವುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಪರಿಸರ ರಕ್ಷಿಸುವಂತೆ ತಾಲ್ಲೂಕಾಡಳಿತ ಮನವಿ ಮಾಡಿದೆ.

error: Content is protected !!