ಶಿವಮೊಗ್ಗ, ಆ.9- ಭಾನುವಾರ ಮಲೆನಾಡಿನಲ್ಲಿ ಮಳೆದೇವ ತನ್ನ ಅರ್ಭಟ ನಿಲ್ಲಿಸಿದ್ದರಿಂದ ಉಕ್ಕಿ ಹರಿ ಯುತ್ತಿದ್ದ ತುಂಗಾ ಮತ್ತು ಭದ್ರಾ ನದಿಗಳಲ್ಲಿ ನೀರು ಇಳಿಮುಖ ಕಂಡಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಭಾನುವಾರ ಸಂಜೆ ವರದಿ ಪ್ರಕಾರ 47 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯದ ಹಿತದೃಷ್ಟಿಯಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬೀಡಲಾಗಿದೆ.
ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ನದಿ ಪಾತ್ರದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಭದ್ರಾ ಜಲಾನಯನ ಪ್ರದೇಶದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯಕ್ಕೆ ಬರುವ ಒಳಹರಿವು ದಿಢೀರ್ ಕುಸಿತ ಕಂಡಿದೆ. ಕಳೆದ 3 ದಿನಗಳಿಂದ ಮುಳುಗಡೆಯಾಗಿದ್ದ ಹೊರನಾಡು-ಕಳಸ ನಡುವಿನ ಹೆಬ್ಬಾಳೆ ಸಂಪರ್ಕ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
ಭದ್ರಾ ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ 47,236 ಕ್ಯೂಸೆಕ್ಸ್ ಇದ್ದ ನೀರಿನ ಒಳಹರಿವು ಸಂಜೆ 7 ಗಂಟೆ ಸುಮಾರಿಗೆ 14,310 ಕ್ಯೂಸೆಕ್ಸ್‌ಗೆ ಇಳಿಕೆ ಕಂಡಿತ್ತು. ಜಲಾಶಯದ ನೀರಿನಮಟ್ಟ 172 ಅಡಿ 10 ಇಂಚು ಆಗಿತ್ತು. ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿರುತ್ತದೆ.
ಸಮಾಧಾನ : ನಮ್ಮ ಮಳೆ ದೇವನ ಕೃಪೆಯಿಂದಾಗಿ ಡ್ಯಾಂಗೆ 6 ದಿನದಲ್ಲೇ 19 ಅಡಿ ನೀರು ಹರಿದು ಬಂದಿದ್ದು, ಸದ್ಯಕ್ಕೆ ಸಮಾಧಾನ ಇದೆ. ಮಹಾ ಮಳೆಯಿಂದ ಅತಿವೃಷ್ಟಿ ಯಾಗಿ ಜನರಿಗೆ ತೊಂದರೆ ಆಗುವುದು ಬೇಡ. ಇನ್ನೂ ಮಳೆ ವಾತಾವರಣವಿದ್ದು, ಶ್ರಾವಣ ಮಾಸ ಮುಗಿಯುವುದರ ಒಳಗಾಗಿ ನಮ್ಮ ಡ್ಯಾಂ ತುಂಬಲಿದೆ ಎಂದು ಮಾಜಿ ಶಾಸಕ ಬಿ.ಪಿ.ಹರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.