ಜಗಳೂರು, ಆ. 4 – ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಶಾಸಕ ಎಸ್.ವಿ. ರಾಮಚಂದ್ರ ಅವರ ನಿವಾಸದ ಮುಂದೆ ವಾಮಾಚಾರ ನಡೆಸಿರುವುದನ್ನು ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಖಂಡಿಸಿದ್ದಾರೆ.
ವಿಷಯ ತಿಳಿದು ನಿವಾಸದ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಪಟ್ಟಣ ಪಂಚಾಯತ್ ಸದಸ್ಯರುಗಳು, ವಾಮಾಚಾರದ ವಸ್ತುಗಳನ್ನು ತೆರವುಗೊಳಿಸುವ ಮೂಲಕ ನಿವಾಸವನ್ನು ಸ್ವಚ್ಛಗೊಳಿಸಲಾಯಿತು.
ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿಗೆ ಶಾಸಕರ ನಿವಾಸದ ಮುಂದೆ ವಾಮಾಚಾರ ನಡೆಸಿರುವುದನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಿ. ವಿ. ನಾಗಪ್ಪ, ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದರು.
ಕ್ಷೇತ್ರದ ಜನರ ರಕ್ಷಣೆ ಇರುವವರೆಗೂ ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ : ಶಾಸಕ ರಾಮಚಂದ್ರ ಪ್ರತಿಕ್ರಿಯೆ
ಜಗಳೂರಿನ ತಮ್ಮ ನಿವಾಸದ ಮುಂದೆ ಕಿಡಿಗೇಡಿಗಳು ಮಾಡಿರುವ ವಾಮಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್.ವಿ. ರಾಮಚಂದ್ರ ಅವರು, ಕ್ಷೇತ್ರದ ಜನರ ಮತ್ತು ಮತದಾರರ ಆಶೀರ್ವಾದ ಮತ್ತು ರಕ್ಷಣೆ ಇರುವವರೆಗೂ ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ರಾಜಕೀಯವಾಗಿ ನನ್ನ ಏಳಿಗೆಯನ್ನು ಸಹಿಸದವರು ಈ ಕೃತ್ಯವನ್ನು ಮಾಡಿರಬಹುದು. ಆದರೆ, ನನಗೆ ಇದರಿಂದ ಏನು ಆಗುವುದಿಲ್ಲ. ಇಂತಹ ಕೃತ್ಯಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಏನೇ ಸಮಸ್ಯೆಗಳಿದ್ದರೂ ರಾಜಕೀಯವಾಗಿ ಎದುರಿಸುತ್ತೇನೆ. ಜನರ ಸೇವೆ ಮಾಡುತ್ತೇನೆ ಎಂದು ಶಾಸಕ ರಾಮಚಂದ್ರ ಪ್ರತಿಕ್ರಿಯಿಸಿದ್ದಾರೆ.
ಶಾಸಕರ ಏಳಿಗೆಯನ್ನು ಸಹಿಸದ ಕಿಡಿಗೇಡಿಗಳು ಈ ರೀತಿಯ ಕೃತ್ಯಗಳನ್ನು ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.
ಪಟ್ಟಣ ಪಂಚಾಯತ್ ಸದಸ್ಯ ಆರ್. ತಿಪ್ಪೇಸ್ವಾಮಿ, ಶಾಸಕರ ಏಳಿಗೆಯನ್ನು ಸಹಿಸದ ವರು ಈ ರೀತಿಯ ಕೃತ್ಯಗಳನ್ನು ಮಾಡಿರಬಹುದು. ಆದರೆ, ಇದರಿಂದ ಏನೂ ಪ್ರಯೋಜನವಿಲ್ಲ. ಇದು ಕೇವಲ ಹೆದರಿಕೆ ಹುಟ್ಟಿಸುವ ಪ್ರಯತ್ನ. ಈ ಕೃತ್ಯವನ್ನು ಖಂಡಿಸುತ್ತೇನೆ ಎಂದರು.
ಪಟ್ಟಣ ಸದಸ್ಯರಾದ ಪಾಪಲಿಂಗಪ್ಪ, ದೇವರಾಜ್, ರೇವಣ್ಣ, ಮುಖಂಡರಾದ ಓಬಳೇಶ್ ಮಂಜಣ್ಣ, ಬಿಜೆಪಿ ಅಧ್ಯಕ್ಷ ಕಿರಣ್, ಮಾಜಿ ಪ್ರಧಾನ ಕಾರ್ಯದರ್ಶಿ ಜೆ. ವಿ. ನಾಗರಾಜ ಸೇರಿದಂತೆ ಅನೇಕ ಕಾರ್ಯಕರ್ತರು ಈ ಕೃತ್ಯವನ್ನು ಖಂಡಿಸಿದ್ದಾರೆ.