ಮಲೇಬೆನ್ನೂರು, ಅ.13 – ರೈತರು ಅಡಮಾನ ಇಟ್ಟಿರುವ ಬಂಗಾರವನ್ನು ಅಸಲು-ಬಡ್ಡಿ ಕಟ್ಟಿಸಿಕೊಂಡು ವಾಪಸ್ ನೀಡುವಂತೆ ಮತ್ತು ಬಂಗಾರ ಸಾಲವನನ್ನು ಇತರೆ ಸಾಲಗಳಿಗೆ ಲಿಂಕ್ ಮಾಡಬೇಡಿ ಎಂದು ಒತ್ತಾಯಿಸಿ ರೈತರು ನಂದಿತಾವರೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಶಾಖೆ ಎದರು ನಿನ್ನೆ ಪ್ರತಿಭಟನೆ ನಡೆಸಿದರು.
ಜಿ.ಪಂ.ಸದಸ್ಯರೂ, ರಾಜ್ಯ ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್ ಮಾತನಾಡಿ, ಹಲವು ವರ್ಷಗಳ ಹಿಂದೆ ಈ ಶಾಖೆಯಲ್ಲಿ ರೈತರು ತಮ್ಮ ತೊಂದರೆಗಾಗಿ ಬಂಗಾರವನ್ನು ಅಡಮಾನ ಮಾಡಿ ಸಾಲ ಪಡೆದಿದ್ದರು. ಆ ಸಾಲಗಳು ಸುಸ್ತಿಯಾಗಿವೆ. ರೈತರು ಈಗ ಅಗಲು ಬಡ್ಡಿ ಹಣ ಜಮಾ ಮಾಡಿ ಬಂಗಾರ ವಾಪಸ್ ಪಡೆದು ಕೊಳ್ಳಲು ತಯಾರಿದ್ದರೂ ಅಧಿಕಾರಿಗಳು ನಿಯಮಗಳನ್ನು ಹೇಳಿ ಬಂಗಾರ ಕೊಡುತ್ತಿಲ್ಲ. ಅಲ್ಲದೇ ಬೇರೆ ಸಾಲಗಳಿಗೆ ಲಿಂಕ್ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಹಳ್ಳಿಯ ಪ್ರಭುಗೌಡ ಮಾತನಾಡಿ, ಬ್ಯಾಂಕ್‍ಗಳಲ್ಲಿ ಬಂಗಾರದ ಸಾಲ ಪಡೆದವರಿಗೆ ಬೇರೆ ಸಾಲಗಳನ್ನು ಲಿಂಕ್ ಮಾಡಬಾರದು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಪಿ.ಎಸ್‍ಐ ವೀರಬಸಪ್ಪ ಅವರು ರೈತರ ಬೇಡಿಕೆಗಳಿಗೆ ಸ್ಪಂದಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದರು. ಈ ವೇಳೆ ಹಾಜರಿದ್ದ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ಸೂಚನೆಯಂತೆ ನಾವು ಕೆಲಸ ಮಾಡುತ್ತೇವೆ. ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ರೈತರ ಒತ್ತಡಕ್ಕೆ ಮಣಿದ ಬ್ಯಾಂಕ್ ಅಧಿಕಾರಿಗಳು ಕೊನೆಗೆ ಅಸಲು ಬಡ್ಡಿ ಕಟ್ಟಿಸಿ ಕೊಂಡು ಬಂಗಾರ ವಾಪಸ್ ನೀಡಲು ಒಪ್ಪಿದಾಗ ರೈತರು ಪ್ರತಿಭಟನೆ ಕೈ ಬಿಟ್ಟರು. ನಂದಿತಾವರೆ ಶಂಭುಲಿಂಗಪ್ಪ, ನಂದೀಶ್, ಶಿವಣ್ಣ, ವೀರಭದ್ರಯ್ಯ, ಕಮಲಾಪುರದ ಕರಿಬಸಮ್ಮ ಪಾಳ್ವ ರುದ್ರಗೌಡ, ಹಿಂಡಸಘಟ್ಟ ನಿಜಗುಣ, ನಂದಿಗುಡಿ ಷಣ್ಮುಖಯ್ಯ, ಹಾಲಿವಾಣದ ಅಂಜಿನಪ್ಪ ಇತರರು ಭಾಗವಹಿಸಿದ್ದರು.