ಐಟಿಐ ಪರೀಕ್ಷಾ ಕೇಂದ್ರಕ್ಕೆ ಒತ್ತಾಯಿಸಿ ಎಸ್‌ಎಫ್‌ಐ ಪ್ರತಿಭಟನೆ

ಜಗಳೂರು, ಆ.30- ತಾಲ್ಲೂಕಿನಲ್ಲಿ ಐಟಿಐ ಎಸ್‌ಸಿವಿಟಿ, ಎನ್‌ಸಿವಿಟಿ ಪರೀಕ್ಷಾ‌ ಕೇಂದ್ರ ತೆರೆಯಲು ಒತ್ತಾಯಿಸಿ, ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ಐಟಿಐ ಕಾಲೇಜಿನಿಂದ ಆಗಮಿಸಿ, ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ, ನಂತರ  ತಹಶೀಲ್ದಾರ್‌ಗೆ ಲಿಖಿತ ಮನವಿ ಸಲ್ಲಿಸಿದರು.

ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಮಹಾಲಿಂಗಪ್ಪ  ಮಾತನಾಡಿ, ಜಗಳೂರು ಅತ್ಯಂತ ಹಿಂದುಳಿದ ಬರಪೀಡಿತ ತಾಲ್ಲೂಕು ಆಗಿದ್ದು ವಿದ್ಯಾರ್ಥಿಗಳು ಪರೀಕ್ಷಾ ವೇಳೆ ದಾವಣಗೆರೆಗೆ ತೆರಳಿ ಪರೀಕ್ಷೆ ಬರೆಯಲು ಸಾವಿರಾರು ರೂಪಾಯಿ ವೆಚ್ಚವಾಗಲಿದೆ. ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಗುವುದಲ್ಲದೆ, ಒತ್ತಡದಿಂದ ಫಲಿತಾಂಶಕ್ಕೆ ಹಿನ್ನಡೆಯಾಗಿ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ ಎಂದರು.

ಇಲ್ಲಿನ ಕಾಲೇಜಿನಲ್ಲಿ ಸಕಲ ಮೂಲ ಸೌಕರ್ಯಗಳಿದ್ದರೂ ಪರೀಕ್ಷಾ ಕೇಂದ್ರ ಇಲ್ಲದಿರುವುದು ದುರಂತವೇ ಸರಿ. ಕೂಡಲೇ ಕೈಗಾರಿಕಾ ತರಬೇತಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಅನಂತರಾಜ್ ಮಾತನಾಡಿ, ನಿರಂತರ ವಿದ್ಯಾರ್ಥಿ ಸಂಘಟನೆಗಳ ಹೋರಾಟದ ಫಲವಾಗಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ತರಬೇತಿ ವರದಾನವಾಗಿದೆ. ಕೋವಿಡ್ ಪರಿಣಾಮ ಸತತ ಎರಡು ವರ್ಷಗಳಿಂದ  ಭೌತಿಕ ತರಗತಿಗಳಿಲ್ಲದೆ ಒಂದೆಡೆ ವಿದ್ಯಾರ್ಥಿ ಗಳ ಗುಣಾತ್ಮಕ ತರಬೇತಿ ಶಿಕ್ಷಣ ಕುಂಠಿತ ವಾಗಿದ್ದರೆ, ಮತ್ತೊಂದೆಡೆ ಸ್ಥಳೀಯವಾಗಿ ಪರೀಕ್ಷಾ ಕೇಂದ್ರವಿಲ್ಲದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ವಿದ್ಯಾರ್ಥಿಗಳಿಗೆ ಅನೂಕೂಲಕರವಾದ ಶೈಕ್ಷಣಿಕ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂದರ್ಭದಲ್ಲಿ  ಎಸ್‌ಎಫ್‌ಐ ತಾಲ್ಲೂಕು ಅಧ್ಯಕ್ಷ ತಮಲೇಹಳ್ಳಿ ಅಂಜಿನಪ್ಪ, ತಿಪ್ಪೇಸ್ವಾಮಿ, ರಂಗನಾಥ, ಓಬಳೇಶ್, ಹನುಮಂತಪ್ಪ, ಮಹೇಶ್,  ರಾಜು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!