ಪಂಚಮವೇದದ ಹುಡುಗಾಟದ ಹುಡುಗ ಕರ್ಪೂರದ ಗೊಂಬೆಯ ತುಂಟ ಯುವಕ, ಅಮೃತವರ್ಷಿಣಿಯ ಭಗ್ನಪ್ರೇಮಿ, ನಮ್ಮೂರ ಮಂದಾರ ಹೂವೇ ಚಿತ್ರದ ತ್ಯಾಗರಾಜ, ಕೋತಿಗಳು ಸಾರ್ ಕೋತಿ ಗಳು ಮತ್ತು ಕುರಿಗಳು ಸಾರ್ ಕುರಿಗಳು ಚಿತ್ರದ ಉತ್ತಮ ಹಾಸ್ಯಗಾರ ಈ ರೀತಿಯ ನಟನೆಯ ನವರಸಗಳಲ್ಲಿ ಅಭಿನಯಿಸಿರುವ ರಮೇಶ್ ಅರವಿಂದ್ ಅವರು ಈ ಬಾರಿ ಸಸ್ಪೆನ್ಸ್, ಥ್ರಿಲ್ಲರ್ ಒಳಗೊಂಡ ಸೈಬರ್ ಕ್ರೈಮ್ ಕಥಾವಸ್ತು ಹೊಂದಿರುವ 100 (Hundred) ಚಿತ್ರದಲ್ಲಿ ಇನ್‌ಸ್ಪೆಕ್ಟರ್ ವಿಷ್ಣು ಪಾತ್ರದಲ್ಲಿ ಅಭಿನಯಿಸಿದ್ದಾರೆ,
ನವೆಂಬರ್ 19ರಿಂದ ನಿಮ್ಮ ಊರಿನ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ 100 (Hundred) ಚಲನಚಿತ್ರ ಬಿಡುಗಡೆ ಯಾಗಿದೆ. ನೈಜ ಘಟನೆಯ ಎಳೆಯೊಂ ದನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಿಂದ ವಂಚನೆಗೊಳಗಾದ ಮಧ್ಯಮ ವರ್ಗದ ಕುಟುಂಬದ ಹೋರಾಟ ಆಧರಿಸಿದ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಸಂದೇಶ ಸಾರುವ ಸಿನಿಮಾ ಆಗಿದೆ.
ಮೊಬೈಲ್ ಹಾಗೂ ಆನ್‍ಲೈನ್ ಜಗತ್ತು ತಪ್ಪಾದ ಪ್ರಭಾವ ಬೀರಿದಾಗ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ, ಮೊಬೈಲ್‍ಗಳಿಂದಾಗಿ ಕುಟುಂಬ ಸದಸ್ಯರು ಮುಖಕೊಟ್ಟು ಮಾತನಾಡದ ಸ್ಥಿತಿಗೆ ತಲುಪಿದ್ದಾರೆ, ಆನ್‍ಲೈನ್ ಜಗತ್ತು ಇಂದು ಯುವ ಪೀಳಿಗೆಯನ್ನು ಯಾವ ದಿಕ್ಕಿನತ್ತ ಕರೆದುಕೊಂಡು ಹೋಗುತ್ತಿದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ,
ಫೇಸ್ಬುಕ್, ವಾಟ್ಸಾಪ್, ಇನ್‍ಸ್ಟಾ ಗ್ರಾಮ್ ಇಂದು ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿವೆ, ಮೊಬೈಲ್ ಇಲ್ಲದೇ ಜೀವನವಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ. ಇದರಿಂದಾಗಿ ನಮಗೆ ಬೇಕು ಬೇಡವೆಲ್ಲವೂ ಸಾಮಾಜಿಕ ಜಾಲತಾಣದ ಮುಖಾಂತರ ಬಂದು ಅನೇಕ ಅವಾಂತರ ಸೃಷ್ಟಿಸಿ ನಮ್ಮ ಅಸ್ತಿತ್ವಕ್ಕೇ ತೊಂದರೆ ನೀಡುವ ಸಾಧ್ಯತೆಗಳೇ ಹೆಚ್ಚು. ಇಂತಹ ವಿಚಾರಗಳ ಸ್ಪಷ್ಟ ಸಂದೇಶ ಸಾರುವ ಚಿತ್ರವೇ 100 (ಹಂಡ್ರೆಡ್).
ಚಿತ್ರದಲ್ಲಿ ರಮೇಶ್ ಅರವಿಂದ್ ಇನ್‍ಸ್ಪೆಕ್ಟರ್ ವಿಷ್ಣು ಪಾತ್ರದಲ್ಲಿ ಖಡಕ್ ಪೋಲಿಸ್ ಅಧಿಕಾರಿಯಾಗಿ ನಟಿಸಿ ಸ್ವತಃ ಅವರೇ ಚಿತ್ರ ನಿರ್ದೇಶನ ಮಾಡಿದ್ದಾರೆ, ಅವರ ಜೊತೆಯಾಗಿ ಡಿಂಪಲ್ ಕ್ವೀನ್ ರಚಿತಾರಾಮ್, ಪೂರ್ಣಾ ಅವರು ನಾಯಕಿಯರಾಗಿ ನಟಿಸಿದ್ದಾರೆ. ಈಗಾಗಲೇ ಉಪ್ಪು, ಹುಳಿ ಖಾರ, ನಾತಿಚರಾಮಿ, ಪಡ್ಡೆಹುಲಿ ಚಲನಚಿತ್ರಗಳನ್ನು ನಿರ್ಮಿಸಿ ಸದಭಿರುಚಿಯ ಚಿತ್ರಗಳ ನಿರ್ಮಾಪಕರೆಂದೇ ಪ್ರಸಿದ್ಧರಾಗಿರುವ ಸರಳ – ಸಜ್ಜನ ವ್ಯಕ್ತಿತ್ವದ ಎಂ. ರಮೇಶ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಚಿತ್ರದ ಪ್ರಚಾರಕ್ಕೆ ದಾವಣಗೆರೆಗೆ ಬಂದಿದ್ದ ರಮೇಶ್ ಅರವಿಂದರನ್ನು ಮಾತಿ ಗೆಳೆದಾಗ ಚಿತ್ರದ ಬಗ್ಗೆ ಕೆಲವು ವಿಚಾರಗ ಳನ್ನು ಅವರು ನಮ್ಮೊಂದಿಗೆ ಹಂಚಿಕೊಂಡರು.
ಲೇಖಕ – ಚಿತ್ರದ ಬಗ್ಗೆ ನಿಮಗೆ ಇರುವ ನಿರೀಕ್ಷೆ?
ರಮೇಶ್ ಅರವಿಂದ್ – ಚಿತ್ರ ಪ್ರಸ್ತುತ ವಾಸ್ತವ ಜೀವನಕ್ಕೆ ಹತ್ತಿರವಾದ ಕಥಾವಸ್ತು ಹೊಂದಿರುವುದರಿಂದ ಖಂಡಿತಾ ಜನರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತೆ ಎನ್ನುವ ನಿರೀಕ್ಷೆ ಇದೆ.
ಲೇಖಕ – ಚಿತ್ರದ ಕಥೆ ನೈಜ ಘಟನೆಯ ಕಥೆಯೇ??
ರಮೇಶ್ ಅರವಿಂದ್ –ಚಿತ್ರ ನೈಜ ಘಟನೆಯ ಎಳೆಯೊಂದನ್ನು ಒಳಗೊಂಡಿದೆ, ಪ್ರಸ್ತುತ ಜನರ ಜೀವನಕ್ಕೆ ಹತ್ತಿರವಾದ ಕಥೆಯಾಗಿದೆ.
ಲೇಖಕ – ರಮೇಶ್ ಅರವಿಂದ್ ಅವರಿಗೆ ವಯಸ್ಸಾಗುವುದು ಯಾವಾಗ?
ರಮೇಶ್ ಅರವಿಂದ್ –ನನ್ನ ತಲೆ ಖಾಲಿಯಾಗಿದೆ. ಹಾಗಾಗಿ ವಯಸ್ಸಾಗು ತ್ತಿಲ್ಲ. ಅಂದರೇ ಬೇಡವಾದ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಓದುವುದು, ಚಲನಚಿತ್ರ ಕುಟುಂಬ ಹೊರತಾಗಿ ಬೇರೆ ಯಾವ ವಿಷಯವನ್ನು ನಾನು ತಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ, ತಲೆ ಖಾಲಿ ಇರುವುದರಿಂದ ವಯಸ್ಸು ಕಾಣುತ್ತಿಲ್ಲ ಎಂದರು.
ಲೇಖಕ – ನಿರ್ಮಾಪಕ ರಮೇಶ ರೆಡ್ಡಿ ಚಿತ್ರ ನಿರ್ದೇಶಿಸುವಾಗ ನಿಮಗೆ ಯಾವ ರೀತಿ ಸಹಕಾರ ನೀಡಿದರು,
ರಮೇಶ್ ಅರವಿಂದ್ –ಈಗಾಗಲೇ ಹಲವು ಉತ್ತಮ ಚಿತ್ರಗಳನ್ನು ನಿರ್ಮಿಸಿ ಅನುಭವವಿರುವ ರಮೇಶ ರೆಡ್ಡಿ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿ, ಚಿತ್ರ ಅದ್ಧೂರಿಯಾಗಿ ಮೂಡಿಬರಲು ಕಾರಣರಾಗಿದ್ದಾರೆ.
ಲೇಖಕ – ದಾವಣಗೆರೆ ಮತ್ತು ದಾವಣಗೆರೆಯ ಜನತೆ ಬಗ್ಗೆ ಏನು ಹೇಳುವಿರಿ?
ರಮೇಶ್ ಅರವಿಂದ್ – ಮೊದಲಿನಿಂದಲೂ ದಾವಣಗೆರೆ ಬೆಣ್ಣೆದೋಸೆ ಮತ್ತು ಮಿರ್ಚಿ ಮಂಡಕ್ಕಿ ಎಂದರೆ ನನಗೆ ತುಂಬಾ ಅಚ್ಚು ಮೆಚ್ಚು, ಹಿಂದೆ ನಿನ್ನೇ ಪ್ರೀತಿಸುವೇ ಎನ್ನುವ ನನ್ನ ಅಭಿನಯದ ಚಿತ್ರವನ್ನು ದಾವಣಗೆರೆ ಜಿಲ್ಲೆಯಲ್ಲಿ ಚಿತ್ರೀಕರಣ ಮಾಡಲಾಗಿತ್ತು, ದಾವಣಗೆರೆ ಚಿತ್ರ ಪೇಮಿಗಳು ಬೆಣ್ಣೆಯಂತಹ ಹೃದಯವುಳ್ಳವರು. ಇಲ್ಲಿನ ಪ್ರೇಕ್ಷಕರ ತೀರ್ಮಾನವು ಚಿತ್ರ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
– ಮಲ್ಲಿಕಾರ್ಜುನ ಬಾವಿಕಟ್ಟೆ, ದಾವಣಗೆರೆ.